ಸಾರಾಂಶ
ಕೊಟ್ಟೂರು: ಸಾಹಿತ್ಯಕ್ಕಿಂತ ಮಾನವೀಯತೆ, ಅಂತಃಕರಣ ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರಲ್ಲಿ ಪ್ರೇರಣೆ ತಂದುಕೊಟ್ಟವರು ಕುವೆಂಪು ಎಂದು ಸಿಂಧನೂರು ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ನಾಗರಾಜ ಮಡಿವಾಳರ ಹೇಳಿದರು.ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ. ಎಚ್.ಜಿ. ರಾಜ್ ಸಭಾಂಗಣದಲ್ಲಿ ಇತ್ತೀಚೆಗೆ ಅಯೋಜಿಸಿದ್ದ ಕುವೆಂಪು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ನೆಲೆಯನ್ನು ಸಾಹಿತ್ಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಂಬಿಸುವ ಮೂಲಕ ಈ ವಲಯಕ್ಕೆ ಧೀಶಕ್ತಿಯನ್ನು ದೊರಕಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದು ಹೇಳಿದರು.ಮಾನವೀಯ ಮೌಲ್ಯಗಳಿಗೆ ವಿಚಾರ ಕ್ರಾಂತಿಯ ಶಕ್ತಿಯನ್ನು ಕುವೆಂಪು ತುಂಬಿ, ಸಾಹಿತ್ಯದ ಮೌಲ್ಯಗಳನ್ನು ಹೆಚ್ಚಿಸಿದರು. ಮನುಜ ಪಥ ವಿಶ್ವ ಪಥ ಎಂಬ ನುಡಿಯಂತೆ ಅಕ್ಷರಶಃ ಸಾಹಿತ್ಯ ವಲಯದಲ್ಲಿ ಕ್ರಾಂತಿ ಮಾಡುವಂತೆ ಮಾಡಿದವರು ಎಂದರು.ವಿಶೇಷ ಉಪನ್ಯಾಸ ನೀಡಿದ ಪರಶುರಾಮಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಮಾತನಾಡಿ, ಕುವೆಂಪು ಇಲ್ಲದ ಸಾಹಿತ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡಕ್ಕೊಂದು ದಿವ್ಯಶಕ್ತಿಯನ್ನು ತಮ್ಮ ಸಾಹಿತ್ಯದ ಮೂಲಕ ತೋರಿ ರಾಷ್ಟ್ರಕವಿ ಎನಿಸಿಕೊಂಡ ಮಹಾತ್ಮರು ಎಂದರು.
ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಉಳಿದೆಲ್ಲ ಸಾಹಿತ್ಯಕ್ಕಿಂತ ಶ್ರೇಷ್ಠವಾದುದು ಎಂದು ತೋರಿಸಿದ್ದು ಕುವೆಂಪು ಅವರು ಎಂದರು.ಹಡಗಲಿಯ ಹಿರಿಯ ಸಾಹಿತಿ ಬಿ.ಎಂ. ಶಂಕ್ರಯ್ಯ ಮಾತನಾಡಿದರು. ನಿವೃತ್ತ ಅಧಿಕಾರಿ ಬಿ. ನಾಗನಗೌಡ, ವರ್ತಕ ಪಿ.ಎಂ. ಗಿರೀಶ್, ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಅಡಿಕಿ ಮಂಜುನಾಥ, ಮಂಜುನಾಥ ಮಠಪತಿ, ಡಿ.ಎಸ್. ಶಿವಮೂರ್ತಿ, ಕೋರಿ ಬಸವರಾಜ, ಪ್ರಾಚಾರ್ಯರಾದ ಡಾ. ಎಂ. ರವಿಕುಮಾರ್, ಎಂ.ಎಚ್. ಪ್ರಶಾಂತ ಕುಮಾರ ಉಪಸ್ಥಿತರಿದ್ದರು.ಆನಂತರ ಕುವೆಂಪು ವಿರಚಿತ ಗೀತೆ ಗಾಯನವನ್ನು ಶೀಲಾವತಿ ಮಹಾದೇವಯ್ಯ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಪ್ರಾಧ್ಯಾಪಕ ಟಿ. ರೇವಣ್ಣ ಸ್ವಾಗತಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.