ಸಾರಾಂಶ
ಕುಂದಾ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯಿತು. ಪ್ರತಿ ವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ನಡೆಯಲಿದ್ದು, ಈ ವರ್ಷ ಅ.17 ಹಾಗೂ 18ರಂದು ಹಬ್ಬ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇತಿಹಾಸ ಪ್ರಸಿದ್ಧ, ಕೊಡಗಿನ ಮೊದಲ ಬೋಡ್ ನಮ್ಮೆ ಖ್ಯಾತಿ ಹೊಂದಿರುವ ‘ಕುಂದಾತ್ ಬೊಟ್ಟ್ ಬೋಡ್ ನಮ್ಮೆ’ಗೆ ಶುಕ್ರವಾರ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಚಾಲನೆ ನೀಡಲಾಯಿತು.ಕುಂದಾ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯಿತು. ಪ್ರತಿ ವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ನಡೆಯಲಿದ್ದು, ಈ ವರ್ಷ ಅ.17 ಹಾಗೂ 18ರಂದು ಹಬ್ಬ ನಡೆಯಲಿದೆ ಎಂದು ಭಂಡಾರ ತಕ್ಕರಾರ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ. ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು, 17ರಂದು ರಾತ್ರಿ ಮನೆ ಕಳಿಯ ಬಳಿಕ 18ರಂದು ಕುಂದಾ ಬೆಟ್ಟದ ಮೇಲೆ ಹಬ್ಬ ನಡೆಯಲಿದೆ.
18ರಂದು ಮಧ್ಯಾಹ್ನ ಸುಮಾರು 12.30ಕ್ಕೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯ ಮನೆಯಿಂದ ಕೃತಕವಾಗಿ ತಯಾರಿಸಿ ಶೃಂಗರಿಸಲಾದ ತಲಾ ಒಂದೊಂದು ಕುದುರೆ ಹೊತ್ತವರು ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನದ ಸಮೀಪದ ಅಂಬಲದಲ್ಲಿ ವಿವಿಧ ವಿಧಿ ವಿಧಾನಗಳನ್ನು ಆಚರಿಸಿ ನಂತರ ಕಡಿದಾದ ಬೆಟ್ಟ ಏರುವ ಮೂಲಕ ಕುಂದಾ ಬೆಟ್ಟದ ಮೇಲಿನ ಹಬ್ಬಕ್ಕೆ ವಿಧ್ಯುಕ್ತ ಚಾಲನೆ ದೊರೆಯುತ್ತದೆ.ಕಡಿದಾದ ಕುಂದಾ ಬೆಟ್ಟವನ್ನು ಏರಿದ ಮೇಲೆ ಅಲ್ಲಿ ಪಾಂಡವರು ನಿರ್ಮಿಸಿದರು ಎನ್ನಲಾಗುವ ಬೊಟ್ ಲಪ್ಪ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ಈ ಮೂಲಕ ಹಬ್ಬ ಆಚರಿಸಲಾಗುತ್ತದೆ ಎಂದು ಭಂಡಾರ ತಕ್ಕ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ.