ಬಸ್‌ಗಳಿಲ್ಲದೇ ಬಿಕೋ ಎಂದ ಕುಂದಗೋಳ ನಿಲ್ದಾಣ

| Published : Aug 06 2025, 01:15 AM IST

ಸಾರಾಂಶ

ನೌಕರರ ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನಜೀವನಕ್ಕೆ ತೀವ್ರ ತೊಂದರೆಯುಂಟಾಯಿತು. ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಮಾತುಕತೆ ವಿಫಲವಾದ ಕಾರಣ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆ ‌ಉಂಟಾಗಿತ್ತು.

ಕುಂದಗೋಳ: ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಮುಷ್ಕರದಿಂದಾಗಿ ಕುಂದಗೋಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಪ್ರತಿದಿನ ಶಾಲೆ, ಕಾಲೇಜು, ಕಚೇರಿಗಳು ಮತ್ತು ಇತರೆ ಕೆಲಸಗಳಿಗಾಗಿ ಪ್ರಯಾಣಿಸುವ ಸಾರ್ವಜನಿಕರು ಬಸ್ ಇಲ್ಲದೆ ಪರದಾಡುವಂತಾಯಿತು. ಬಸ್‌ಗಳಿಲ್ಲದ ಕಾರಣ ಮೂಲಸ್ಥಾನ ತಲುಪಲಾಗದೆ ಪ್ರಯಾಣಿಕರು ಗೊಂದಲಕ್ಕೀಡಾದರು. ವಿಶೇಷವಾಗಿ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಬಂದಿದ್ದ ಜನರು ತಮ್ಮ ಊರುಗಳಿಗೆ ಹಿಂದಿರುಗಲು ಖಾಸಗಿ ವಾಹನಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.

ನೌಕರರ ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನಜೀವನಕ್ಕೆ ತೀವ್ರ ತೊಂದರೆಯುಂಟಾಯಿತು. ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಮಾತುಕತೆ ವಿಫಲವಾದ ಕಾರಣ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆ ‌ಉಂಟಾಗಿತ್ತು.

ಕಲಘಟಗಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಕಲಘಟಗಿ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ರಾಜ್ಯಾದ್ಯಂತ ಮಂಗಳವಾರ ಕರೆ ನೀಡಿದ ಮುಷ್ಕರಕ್ಕೆ ಪಟ್ಟಣದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಯಾವುದೇ ಬಸ್ ಗಳು ಇಲ್ಲದೆ ಸಂಚಾರ ಸ್ಥಗಿತವಾಗಿತ್ತು, ಇದರಿಂದ ಪ್ರಯಾಣಿಕರಿಗೆ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಸಮಸ್ಯೆ ಉಂಟಾಗಿತ್ತು . ಮಂಗಳವಾರ ಸಂತೆ ಇರುವುದರಿಂದ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಸಂತೆಗೆ ಬರುವವರಿಗೆ ತುಂಬಾ ಅನಾನುಕೂಲತೆ ಉಂಟಾಯಿತು. ಇದರಿಂದ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸುವಂತಾಯಿತು.

ಮಧ್ಯಾಹ್ನದಿಂದ ಬಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿ ಕಲಘಟಗಿ ಪಟ್ಟಣದಿಂದ ಹುಬ್ಬಳ್ಳಿ, ಧಾರವಾಡ, ಹಳಿಯಾಳ, ಸೇರಿದಂತೆ ಗ್ರಾಮೀಣ ಭಾಗಗಳಿಗೂ ಬಸ್ ಸಂಚಾರ ಪುನಃ ಪ್ರಾರಂಭವಾದವು.