ಕನ್ನಡ ಕಟ್ಟಿದ ಪ್ರಮುಖರಲ್ಲಿ ಕುಂದಣಗಾರ ಒಬ್ಬರು

| Published : Dec 27 2023, 01:31 AM IST

ಸಾರಾಂಶ

ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸೌಂದರ್ಯ ಫೌಂಡೇಶನ ಹಾಗೂ ಕೆ.ಜಿ. ಕುಂದಣಗಾರ ಅಭಿಮಾನಿಗಳ ಬಂಗಾರ ಬಳಗ ಸಂಯುಕ್ತಾಶ್ರಯದಲ್ಲಿ ರಾಜ್ಯೋತ್ಸವ ಸಂಭ್ರಮ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

- ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿದ ನ್ಯಾಯವಾದಿ ಗುರು ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

20ನೇ ಶತಮಾನದ ಆರಂಭಿಕ ಕಾಲಘಟ್ಟದಲ್ಲಿ ಕನ್ನಡ ಕಟ್ಟಿದ ಪ್ರಮುಖರಲ್ಲಿ ಪ್ರೊ. ಕೆ.ಜಿ. ಕುಂದಣಗಾರ ಒಬ್ಬರು. ಶ್ರೇಷ್ಠ ಸಂಶೋಧಕರಾಗಿ, ವಿಮರ್ಶಕರಾಗಿ, ಸೃಜನಶೀಲ ಬರಹಗಾರರಾಗಿ ಕನ್ನಡಕ್ಕಾಗಿ ಮಾಡಿದ ಕಾರ್ಯ ಅದ್ವಿತೀಯ ಎಂದು ನ್ಯಾಯವಾದಿ ಗುರು ಹಿರೇಮಠ ಹೇಳಿದರು.

ಸೌಂದರ್ಯ ಫೌಂಡೇಶನ ಹಾಗೂ ಕೆ.ಜಿ. ಕುಂದಣಗಾರ ಅಭಿಮಾನಿಗಳ ಬಂಗಾರ ಬಳಗ ಸಂಯುಕ್ತಾಶ್ರಯದಲ್ಲಿ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ 68ನೇ ರಾಜ್ಯೋತ್ಸವ ಸಂಭ್ರಮ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆ ಕಾಲಘಟ್ಟದಲ್ಲಿ ಶಾಸನಗಳು ಹಾಗೂ ಲಿಪಿಗಳಿಗೆ ಸಂಬಂಧಿಸಿದಂತೆ ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಸ್ಮರಣೆಯ ಕಾರ್ಯಕ್ರಮ ಹಮ್ಮಿಕೊಂಡಿರುವುದ ಶ್ಲಾಘನೀಯ ಎಂದರು.

ಶಿಕ್ಷಕ ಸಿ.ಸಿ. ಹಿರೇಮಠ ಮಾತನಾಡಿ, ಪ್ರೊ. ಕೆ.ಜಿ. ಕುಂದಣಗಾರ ಕಿತ್ತು ತಿನ್ನುವ ಬಡತನ, ಅನೇಕ ತೊಂದರೆ-ತಾಪತ್ರಯ ಇದ್ದರೂ ಅವೆಲ್ಲವನ್ನು ಮೆಟ್ಟಿನಿಂತು ಕನ್ನಡ ಕಟ್ಟುವಲ್ಲಿ ಅವರ ಉತ್ಸಾಹ ಹಾಗೂ ಇಚ್ಚಾಶಕ್ತಿ ಇಂದಿನ ಪೀಳಿಗೆಗೆ ಮಾದರಿ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವಕರ್ಮ ಸಂಘದ ಅಧ್ಯಕ್ಷ ಕಾಳಪ್ಪ ಬಡಿಗೇರ ಹಾಗೂ ಸಾಹಿತಿ ಎಂ. ಸುದರ್ಶನರಾಜ್ ಪ್ರೊ. ಕೆ. ಜಿ. ಕುಂದಣಗಾರರು ಕನ್ನಡಕ್ಕಾಗಿ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಠಲ ಕಮ್ಮಾರ, ರಾಬರ್ಟ ಸೈಮನ್ ಲೋಬೊ, ಹೇಮಂತ ಬಡಿಗೇರ, ಶ್ರೀಶೈಲ ರಾಚಣ್ಣವರ, ಕಾಳಪ್ಪ ಬಡಿಗೇರ, ಎಂ.ವಿ. ಹುಂಡಾಳೆ, ರೇಣುಕಾ ಹೊಂಗಲ, ವಿಕ್ಟೋರಿಯಾ ಗೋನ್ಸಾಲಿಸ್, ಜಗನಾಥರಾವ ಗಡದೆ ಇವರನ್ನು ಸನ್ಮಾನಿಸಲಾಯಿತು.

ಸಾಹಿತಿ ಎಸ್.ಎಸ್. ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಮುಂಡಗೋಡಿನ ಚಿದಾನಂದ ಪಾಟೀಲ ಹಾಗೂ ಎ.ಎ. ದರ್ಗಾ, ಅನುರಾಧಾ ಕುಲಕರ್ಣಿ, ಲಾಲಬಿ ಹುಲಕೋಟಿ, ಶಾಂತಾ ಹೊಂಬಳ, ಮಹಾಂತೇಶ ನರೇಗಲ್ಲ, ಗುರುಶಿದ್ದಪ್ಪ ಶೆಟ್ಟರ, ಪ್ರಮೋದ ಜೋಶಿ, ಇಂದುಮತಿ ರಾಘವೇಂದ್ರ, ಭಾರತಿ ಬಡಿಗೇರ, ವಿನಾಯಕ ಕಲ್ಲೂರ ಸೇರಿದಂತೆ ಅನೇಕರು ಕವಿತೆ ವಾಚಿಸಿದರು.

ಕೆ.ಜಿ. ಕುಂದಣಗಾರ ಬಳಗದ ಅಧ್ಯಕ್ಷ ಲಾರೆನ್ಸ ಝಳಕಿ, ಸೌಂದರ್ಯ ಫೌಂಡೇಶನ ಅಧ್ಯಕ್ಷ ಮಂಜುನಾಥ ಬಡಿಗೇರ ಇದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು.