ಕುಂದಾಪುರ ಪುರಸಭೆ: ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್‌ದಾಸ್‌ ಶೆಣೈ ಆಯ್ಕೆ

| Published : Aug 30 2024, 01:01 AM IST / Updated: Aug 30 2024, 01:02 AM IST

ಕುಂದಾಪುರ ಪುರಸಭೆ: ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್‌ದಾಸ್‌ ಶೆಣೈ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲಾತಿಯಂತೆ ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯರಿಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನ್‌ದಾಸ್ ಶೆಣೈ ಹಾಗೂ ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಎಸ್. ಬಿಲ್ಲವ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಸದಸ್ಯೆ ಕಮಲಾ ಮಂಜುನಾಥ ಪೂಜಾರಿ ನಾಮಪತ್ರ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಹಾಗೂ ಉಪಾಧ್ಯಕ್ಷೆಯಾಗಿ ವನಿತಾ ಎಸ್. ಬಿಲ್ಲವ ಆಯ್ಕೆಯಾಗಿದ್ದಾರೆ.ಮೀಸಲಾತಿಯಂತೆ ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯರಿಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನ್‌ದಾಸ್ ಶೆಣೈ ಹಾಗೂ ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಎಸ್. ಬಿಲ್ಲವ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಸದಸ್ಯೆ ಕಮಲಾ ಮಂಜುನಾಥ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಎ.ಕಿರಣ್‌ ಕುಮಾರ್ ಕೊಡ್ಗಿ ಸೇರಿ ಬಿಜೆಪಿ ಪಾಳಯದಲ್ಲಿ 16 ಮತಗಳ ಸಂಗ್ರಹವಿತ್ತು. ವಯಕ್ತಿಕ ಕಾರಣಗಳಿಂದಾಗಿ ಕಾಂಗ್ರೆಸ್ ಸದಸ್ಯೆ ಲಕ್ಷ್ಮೀ ಬಾಯಿ ಗೈರು ಹಾಜರಾಗಿದ್ದರಿಂದ ಚಲಾವಣೆಯಾದ 24 ಮತಗಳಲ್ಲಿ 16-8 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕುಂದಾಪುರ ತಹಸೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ ಚುನಾವಣಾಧಿಕಾರಿಯಾಗಿದ್ದರು. ಪುರಸಭೆಯ ಮುಖ್ಯಾಧಿಕಾರಿ ಆನಂದ ಇದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರನ್‌ ಕುಮಾರ್‌ ಕೊಡ್ಗಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಮುಖರಾದ ಸುರೇಶ್ ಶೆಟ್ಟಿ ಗೋಪಾಡಿ, ಸುಧೀರ್ ಕೆ.ಎಸ್., ವಿಜಯ್ ಎಸ್. ಪೂಜಾರಿ, ಸಂಪತ್ ಕುಮಾರ ಶೆಟ್ಟಿ ಹಾಗೂ ಪುರಸಭಾ ಸದಸ್ಯರು ಅಭಿನಂದಿಸಿದರು.ಮೂರನೇ ಬಾರಿಗೆ ಒಲಿದ ಅಧ್ಯಕ್ಷಗಾದಿ: ಸತತ ಐದು ಬಾರಿ ಪುರಸಭಾ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಪಕ್ಷದ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಅವರಿಗೆ ಮತ್ತೊಮ್ಮೆ ಅಧ್ಯಕ್ಷರಾಗಿ ಅವಕಾಶ ದೊರಕುವ ಮೂಲಕ ಮೂರನೇ ಬಾರಿ ಕುಂದಾಪುರ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೋಹನ್‌ದಾಸ್‌ ಶೆಣೈ, 8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ಒಳ ಚರಂಡಿ ಯೋಜನೆಯನ್ನು ಕಾರ್ಯಗತಗೊಳಿಸಲು, ಶಾಸಕರ ಮಾರ್ಗದರ್ಶನದಲ್ಲಿ ಸಂಬಂಧಪಟ್ಟವರೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ಈ ಯೋಜನೆಯನ್ನು ಶೀಘ್ರ ಜನೋಪಯೋಗಿಗೊಳಿಸಲು ಪ್ರಯತ್ನಿಸುತ್ತೇನೆ. ಪುರಸಭೆಯ ಉಳಿದ ಅವಧಿಯಲ್ಲಿ ಮಾದರಿಯಾಗುವ ರೀತಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

-----ಚರ್ಚೆ ಹುಟ್ಟುಹಾಕಿದ ಜಿಲ್ಲಾಧ್ಯಕ್ಷರ ಗೈರು!

ಬಿಜೆಪಿಯೊಳಗೆ ಅಧ್ಯಕ್ಷಗಾದಿಗಾಗಿ ಕೊನೆ ಕ್ಷಣದವರೆಗೂ ತೆರೆಮರೆಯ ಕಸರತ್ತು ನಡೆದಿದ್ದು, ಮೋಹನ್ ದಾಸ್ ಶೆಣೈ ಜೊತೆಗೆ ಶಾಸಕರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಂತೋಷ್ ಶೆಟ್ಟಿ ಹಾಗೂ ಗಿರೀಶ್ ದೇವಾಡಿಗ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗಿರೀಶ್ ದೇವಾಡಿಗ ಅವರಿಗೆ ಪಕ್ಷ ಮಣೆ ಹಾಕಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಚುನಾವಣಾ ಪ್ರಕ್ರಿಯೆ ವೇಳೆ ಬಿಜೆಪಿಯ ಎಲ್ಲಾ ಮುಖಂಡರೂ ಸಭಾಂಗಣದ ಹೊರಗೆ ಜಮಾಯಿಸಿದರೂ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಹಾಗೂ ಮೋಹನ್ ದಾಸ್ ಶೆಣೈ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಪರಾಭವಗೊಂಡ ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಗೈರಾಗಿರುವ ಕುರಿತು ಬಿಜೆಪಿ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.