ಸಾರಾಂಶ
ಪದ್ಮನಾಭ ಭಟ್ ಬೆಂಗಳೂರಿಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಣ ಪಡೆದವರು, ಅಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಉತ್ತರಾಖಂಡ ರಾಜ್ಯದ ಸಹಸ್ರತಾಲ್ ಚಾರಣ ದುರಂತದಲ್ಲಿ ಮೃತಪಟ್ಟ ರಾಜ್ಯದ 9 ಮಂದಿ ಪೈಕಿ ಪದ್ಮನಾಭ ಭಟ್ (50) ಎಂಬವರು ಮೂಲತಃ ಕುಂದಾಪುರ ತಾಲೂಕಿನವರು. ಇಲ್ಲಿನ ಕುಂಬಾಶಿ ಗ್ರಾಮದ ಕೊರವಡಿ ಎಂಬಲ್ಲಿ ಅವರ ಹಿರಿಯರ ಮನೆ ಇದೆ.ಪದ್ಮನಾಭ ಭಟ್ ಬೆಂಗಳೂರಿಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಣ ಪಡೆದವರು, ಅಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಚಾರಣಪ್ರಿಯರಾಗಿದ್ದ ಅವರು ಈ ಹಿಂದೆಯೂ ಗೆಳೆಯರೊಂದಿಗೆ ಅನೇಕ ಚಾರಣಗಳಲ್ಲಿ ಯಸ್ವಿಯಾಗಿ ಭಾಗವಹಿಸಿದ್ದರು. ಆದರೆ ಈ ಬಾರಿ ಸಹಸ್ರತಾಲ್ ಎಂಬಲ್ಲಿ ಚಾರಣ ಮುಗಿಸಿ ಹಿಂದಕ್ಕೆ ಬರುವಾಗ ಅಚಾನಕ್ಕಾಗಿ ಬೀಸಿದ ಭಾರಿ ಶೀತ ಗಾಳಿ ಮತ್ತು ಮಳೆಗೆ ಬಲಿಯಾಗಿದ್ದಾರೆ. ಅವರ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಬೆಂಗಳೂರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.ಪ್ರಸ್ತುತ ಊರಿನಲ್ಲಿರುವ ಮನೆಯಲ್ಲಿ ಸಂಬಂಧಿಕರಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ ಪದ್ಮನಾಭ್ ಭಟ್ ಅವರು ತಂದೆಯ ಊರು, ಮನೆಯನ್ನು ಮರೆತಿರಲಿಲ್ಲ. ಊರಿನ ಹರಿಹರ ದೇವಾಲಯ ಮತ್ತು ನಂದಿಕೇಶ್ವರ ದೈವಸ್ಥಾನಗಳಿಗೆ ಧನಸಹಾಯ ಮಾಡಿದ್ದರು.