ಕುಂದಾಪುರ: ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು

| Published : Sep 08 2025, 01:01 AM IST

ಕುಂದಾಪುರ: ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಗೌತಮ್ (19), ಲೋಕೇಶ್ (19) ಹಾಗೂ ಆಶೀಸ್ (18) ಮೃತರು. ಕಾಲೇಜಿಗೆ ಸಾಲಾಗಿ ರಜೆಗಳಿದ್ದುದರಿಂದ ಒಟ್ಟು 10 ಮಂದಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಇಲ್ಲಿನ ಕುಂಬಾಶಿಯ ಹೊಟೇಲಿನಲ್ಲಿ ತಂಗಿದ್ದು, ಭಾನುವಾರ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಚೆರ್ಕಿಕಡು ಬೀಚಿಗೆ ಬಂದು ಸಮುದ್ರಕ್ಕೆ ಇಳಿದಿದ್ದರು.

ಸ್ಥಳೀಯರ ಎಚ್ಚರಿಕೆ ಮಾತು ನಿರ್ಲಕ್ಷಿಸಿ ಪ್ರಾಣ ಕಳೆದುಕೊಂಡ ಯುವಕರು!

ಕನ್ನಡಪ್ರಭ ವಾರ್ತೆ ಕುಂದಾಪುರ

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 3 ಮಂದಿ ಯುವಕರು ಭಾನುವಾರ ಇಲ್ಲಿನ ಗೋಪಾಲ ಚೆರ್ಕಿಕಡು ಎಂಬಲ್ಲಿ ಸಮುದ್ರದಲ್ಲಿ ಈಜುವುದಕ್ಕೆ ಹೋಗಿ ಮುಳುಗಿ ಮೃತಪಟ್ಟಿದ್ದಾರೆ, ಒಬ್ಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ.ಗೌತಮ್ (19), ಲೋಕೇಶ್ (19) ಹಾಗೂ ಆಶೀಸ್ (18) ಮೃತರು. ಕಾಲೇಜಿಗೆ ಸಾಲಾಗಿ ರಜೆಗಳಿದ್ದುದರಿಂದ ಒಟ್ಟು 10 ಮಂದಿ ವಿದ್ಯಾರ್ಥಿಗಳು ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಇಲ್ಲಿನ ಕುಂಬಾಶಿಯ ಹೊಟೇಲಿನಲ್ಲಿ ತಂಗಿದ್ದು, ಭಾನುವಾರ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಚೆರ್ಕಿಕಡು ಬೀಚಿಗೆ ಬಂದು ಸಮುದ್ರಕ್ಕೆ ಇಳಿದಿದ್ದರು.ಪ್ರಸ್ತುತ ಸಮುದ್ರ ತೀವ್ರ ಒರಟಾಗಿದ್ದು, ಈ ವಿದ್ಯಾರ್ಥಿಗಳು ಸ್ಥಳೀಯ ಮೀನುಗಾರರ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಳ್ಳದೆ ಸಮುದ್ರಕ್ಕೆ ಇಳಿದಿದ್ದರು, ಅವರನಲ್ಲಿ ನಾಲ್ವರನ್ನು ಭಾರೀ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಿದ್ದು, ತಕ್ಷಣ ಉಳಿದ ವಿದ್ಯಾರ್ಥಿಗಳು ಬೊಬ್ಬೆ ಹೊಡೆದರು, ಅಲ್ಲಿಯೇ ಹೊಟೇಲಿನಲ್ಲಿ ಊಟ ಮಾಡುತ್ತಿದ್ದ ಮೀನುಗಾರರು ಧಾವಿಸಿ ನಿರೂಪ್ (19) ಎಂಬಾತನನ್ನು ದಡಕ್ಕೆ ಎಳೆದುತಂದಿದ್ದಾರೆ, ತೀವ್ರ ಅಸ್ವಸ್ಥವಾಗಿದ್ದ ಆತನನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಉಳಿದ ಮೂವರು ಸಮುದ್ರ ಅಲೆಗಳಲ್ಲಿ ಕಾಣೆಯಾಗಿದ್ದರು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವರಾದ ಈಶ್ವರ ಮಲ್ಪೆ, ನಾಗರಾಜ ಪುತ್ರನ್ ಸಮುದ್ರಕ್ಕಿಳಿದು ಇಬ್ಬರನ್ನು ಮೇಲೆಕ್ಕೆ ತರಲಾಯಿತು, ಆದರೆ ಅವರಾಗಲೇ ಉಸಿರುಗಟ್ಟಿ ಮೃತಪಟ್ಟಿದ್ದರು. ಸಾಕಷ್ಟು ಹೊತ್ತಿನ ನಂತರ ಇನ್ನೊಬ್ಬಾತನ ಶವವೂ ಪತ್ತೆಯಾಯಿತು.ಅವರೆಲ್ಲರೂ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ, ಶನಿವಾರ ರೈಲಿನಲ್ಲಿ ಬಂದು ಇಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದರು. ತಡರಾತ್ರಿವರೆಗೂ ಲಾಡ್ಜ್‌ ಹೊರಗೆ ಮೋಜು ಮಾಡುತ್ತಿದ್ದ ಅವರನ್ನು ಗಸ್ತು ಪೊಲೀಸರು ಗದರಿಸಿ ರೂಮಿಗೆ ಕಳುಹಿಸಿದ್ದರು.

ಭಾನುವಾರ ಬೆಳಗ್ಗೆ 4 ಮಂದಿ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಲೊಕೇಶನ್ ಹಾಕಿ ನಡೆದುಕೊಂಡು ಚೆರ್ಕಿಕಡು ಸಮುದ್ರ ತೀರಕ್ಕೆ ಬಂದಿದ್ದರು, ಆಗ ಸ್ಥಳೀಯರು ಸಮುದ್ರದ ಅಪಾಯವನ್ನು ಹೇಳಿ ಹಿಂದಕ್ಕೆ ಕಳುಹಿಸಿದ್ದರು. ಮಧ್ಯಾಹ್ನ 9 ವಿದ್ಯಾರ್ಥಿಗಳು ಸಮುದ್ರ ತೀರಕ್ಕೆ ಬಂದಿದ್ದರು. ಒಬ್ಬಾತ ಸಮುದ್ರ ಉಪ್ಪು ನೀರಿನ ಅಲರ್ಜಿ ಇದೆ ಎಂದು ರೂಮಿನಲ್ಲಿ ಉಳಿದುಕೊಂಡಿದ್ದ. ಸ್ಥಳೀಯರ ಎಚ್ಚರಿಕೆ ಮಾತನ್ನು ಕೇಳದೆ ಸಮುದ್ರಕ್ಕಿಳಿದು ದಾರುಣ ಘಟನೆಗೆ ಕಾರಣರಾಗಿದ್ದಾರೆ. ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಹೆಚ್‌.ಡಿ.ಕುಲಕರ್ಣಿ, ಸರ್ಕಲ್‌ ಇನ್ಸ್‌ಪೆಕ್ಟರ್ ಜಯರಾಮ್ ಗೌಡ, ನಗರ ಠಾಣೆಯ ಎಸ್‌ಐ ನಂಜಾ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದ್ದು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ಮೃತ ವಿದ್ಯಾರ್ಥಿಗಳ ವಿವರಗೌತಮ್: ಬೆಂಗಳೂರಿನ ಗಾರ್ಡನ್ ಸಿಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ.

ಆಶೀಸ್: ಬೆಂಗಳೂರಿನ ಪಿಇಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ

ಲೋಕೇಶ್: ಬೆಂಗಳೂರಿನ ಬಿ ಫಾರ್ಮ ಕಾಲೇಜು ವಿದ್ಯಾರ್ಥಿ.