ಉಡುಪಿ: ಇಲ್ಲಿನ ಯಕ್ಷಶಿಕ್ಷಣ ಟ್ರಸ್ಟ್ ಸಂಸ್ಥೆಯು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ವ್ಯಾಪ್ತಿಯಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಕುಂದಾಪುರ ವಿಧಾನ ಸಭಾ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಸಮಾಲೋಚನಾ ಸಭೆ ಸೋಮವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ, ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.
ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನ ತರಬೇತಿಯ ಸ್ವರೂಪ ವಿವರಿಸಿ ಆಸಕ್ತ ಮುಖ್ಯೋಪಾಧ್ಯಾಯರು ತಮ್ಮ ಶಾಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸುವಲ್ಲಿ ಅನುಸರಿಸಬೇಕಾದ ಕೆಲವು ಸೂಚನೆಗಳನ್ನು ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕೊಡ್ಗಿ ಅವರು ಯಕ್ಷಗಾನ ಕಲಾರಂಗ ನಿಸ್ಪೃಹವಾಗಿ ಮಾಡುವ ಈ ಕೆಲಸಕ್ಕೆ ಚೆನ್ನಾಗಿ ಸ್ಪಂದಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬ್ರಹ್ಮಾವರ ಕ್ಷೇತ್ರಶಿಕ್ಷಣಾಧಿಕಾರಿ ಉಮಾ ಪಠ್ಯದೊಂದಿಗೆ ಯಕ್ಷಗಾನದಂತಹ ಕಲೆಯ ಕಲಿಕೆ ಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದರು.
ಸಂವಾದದಲ್ಲಿ ಭಾಗವಹಿಸಿದ ಮುಖ್ಯಶಿಕ್ಷಕರಾದ ಕಿರಣ್ ಹೆಗ್ಡೆ, ಚಂದ್ರಶೇಖರ್ ಶೆಟ್ಟಿ, ಅಬ್ದುಲ್ ರವೂಫ್, ವೆಂಕಟೇಶ್ ಉಡುಪ ಮಾತನಾಡಿ, ಯಕ್ಷಗಾನ ಕಲಿಕೆ ಪರೀಕ್ಷಾ ಫಲಿತಾಂಶಕ್ಕೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ಹಂಚಿಕೊಂಡರು. ಯಕ್ಷಶಿಕ್ಷಣ ಟ್ರಸ್ಟಿ ನಾರಾಯಣ ಎಂ. ಹೆಗಡೆ ಇದ್ದರು. ಕುಸುಮಾಕರ ಶೆಟ್ಟಿ ಸ್ವಾಗತಿಸಿದರು. ಕಳೆದ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ 21 ಶಾಲೆಗಳಲ್ಲಿ ಯಕ್ಷಶಿಕ್ಷಣ ನಡೆದಿತ್ತು. ಈ ಬಾರಿ 5 ಪ್ರೌಢಶಾಲೆಯ ಮುಖ್ಯಶಿಕ್ಷಕರು ಬೇಡಿಕೆಯನ್ನು ಸಲ್ಲಿಸಿದ್ದು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಹೀಗೆ 26 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ಆರಂಭಗೊಳ್ಳಲಿದೆ.