ಕುಣಿಗಲ್: 3 ತಿಂಗಳ ಸಂಬಳಕ್ಕಾಗಿ ಪೌರಕಾರ್ಮಿಕರ ಪ್ರತಿಭಟನೆ

| Published : Feb 13 2024, 12:47 AM IST / Updated: Feb 13 2024, 03:27 PM IST

ಕುಣಿಗಲ್: 3 ತಿಂಗಳ ಸಂಬಳಕ್ಕಾಗಿ ಪೌರಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸ್ವಚ್ಛತಾ ಆಂದೋಲನಕ್ಕಾಗಿ ಕಳೆದ ಮೂರು ತಿಂಗಳಿಂದ ದುಡಿಸಿಕೊಂಡ ಪೌರ ಕಾರ್ಮಿಕರಿಗೆ ಸಂಬಳ ನೀಡದೆ ಏಕಾಏಕಿ ನಮ್ಮನ್ನು ಹೊರ ಹಾಕಿದೆ ಎಂದು ಹಲವಾರು ಕಾರ್ಮಿಕರು ಪುರಸಭಾ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಪಟ್ಟಣದ ಸ್ವಚ್ಛತಾ ಆಂದೋಲನಕ್ಕಾಗಿ ಕಳೆದ ಮೂರು ತಿಂಗಳಿಂದ ದುಡಿಸಿಕೊಂಡ ಪೌರ ಕಾರ್ಮಿಕರಿಗೆ ಸಂಬಳ ನೀಡದೆ ಏಕಾಏಕಿ ನಮ್ಮನ್ನು ಹೊರ ಹಾಕಿದೆ ಎಂದು ಹಲವಾರು ಕಾರ್ಮಿಕರು ಪುರಸಭಾ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಸ್ವಚ್ಛತಾ ಅಭಿಯಾನಕ್ಕಾಗಿ ಕುಣಿಗಲ್ ಪಟ್ಟಣದ ಹಲವೆಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ತಿಪಟೂರು, ಪಾವಗಡ, ಕುಣಿಗಲ್ ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಹಲವಾರು ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. 

ಆದರೆ ಇದುವರೆಗೂ ಕೂಡ ಸಂಬಳ ನೀಡಿಲ್ಲ ಎಂದು ಆರೋಪಿಸಿದ ಕಾರ್ಮಿಕರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಪೌರಕಾರ್ಮಿಕರ ಅಧ್ಯಕ್ಷೆ ಸರಸ್ವತಮ್ಮ, ಅಧಿಕಾರಿಗಳು ಈ ಕಾರ್ಮಿಕರನ್ನು ಕೆಲಸಕ್ಕೆ ಪಡೆದು ಮೂರು ತಿಂಗಳು ಕೆಲಸ ಮಾಡಿಸಿದ್ದಾರೆ. 

ಇದೀಗ ಟೆಂಡರ್‌ ಆಗಿಲ್ಲ, ನಿಮಗೆ ಸಂಬಳ ಕೊಡಲು ಆಗುವುದಿಲ್ಲ. ಹೀಗೆ ಹಲವಾರು ಕಾರಣ ಹೇಳಿ ನಮ್ಮನ್ನು ಬರಬೇಡಿ ಎನ್ನುತ್ತಿದ್ದಾರೆ. 

ಮೂರು ತಿಂಗಳು ಕಾರ್ಯ ಮಾಡಿರುವ ಅವರಿಗೆ ಸಂಬಳ ನೀಡುವರು ಯಾರು, ಬಡವರ ಜೀವನದ ಜೊತೆ ಪುರಸಭಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭಾ ಮುಖ್ಯ ಅಧಿಕಾರಿ ಶಿವ ಶಂಕರ್, ಹೊರಗುತ್ತಿಗೆ ಆದಾರದ ಮೇಲೆ ಟೆಂಡರ್ ತೆಗೆದುಕೊಳ್ಳುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. 

ನಂತರದ ವ್ಯವಸ್ಥೆ ಮಾಡುತ್ತೇವೆ. ಒಂದು ತಿಂಗಳ ಸಂಬಳವನ್ನು ಪುರಸಭಾ ವತಿಯಿಂದ ನೀಡುವ ವ್ಯವಸ್ಥೆ ಮಾಡುತ್ತೇವೆ. 

ಆದರೆ ಇವರು ಬಲವಂತವಾಗಿ ಮೂರು ತಿಂಗಳು ಕಾರ್ಯನಿರ್ವಹಿಸಿದ್ದಾರೆ. ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಅರುಣ್ ಕುಮಾರ್‌ ಆನಂದ್, ರಂಗಸ್ವಾಮಿ ಸೇರಿದಂತೆ ಇತರ ಪ್ರಸ್ತುತ ಸದಸ್ಯರು ಹಾಗೂ ಪೌರಕಾರ್ಮಿಕರು ಇದ್ದರು.