ಸಾರಾಂಶ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಣಿಪಾಲದ ಸಂಗಮ ಕಲಾವಿದೆರ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ‘ಕುರಲ್ - ತುಳು ಸಾಹಿತ್ಯ ಸಾಂಸ್ಕೃತಿಕ ಪರ್ಬ’ ಮಾ.19ರಂದು ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಣಿಪಾಲದ ಸಂಗಮ ಕಲಾವಿದೆರ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ‘ಕುರಲ್ - ತುಳು ಸಾಹಿತ್ಯ ಸಾಂಸ್ಕೃತಿಕ ಪರ್ಬ’ ಮಾ.19ರಂದು ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಮಾಹಿತಿ ನೀಡಿದರು.ಅಂದು ಬೆಳಗ್ಗೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ನವೋದಯ ಸಾಂಸ್ಕೃತಿಕ ಕಲಾತಂಡ ಪಾಂಬೂರು ತಂಡದಿಂದ ಡೋಲು ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಲೇಖಕ ಪ್ರೊ. ಮುರಳಿಧರ ಉಪಾಧ್ಯಾಯ ಮತ್ತು ಎಚ್‌ಪಿಆರ್ ಗ್ರೂಪ್ಸ್ ಆಫ್ ಇನ್‌ಸ್ಟಿಟ್ಯೂಷನಿನ ಅಧ್ಯಕ್ಷ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಈ ಇಡೀ ದಿನದ ಕಾರ್ಯಕ್ರಮದಲ್ಲಿ ‘ಸೊತ ಬರೆಯಿ ಕಬಿತೆದ ಓದು, ಭಾಷಣ ಪಂತ, ತುಳು ಪದ ಕೊಲ್ಕೆ, ತುಳು ನಲಿಕೆ, ತುಳುನಾಡ ತುತ್ತೈದ ಪೊರ್ಲ ತೂಪರಿಕೆ, ಫೋಟ್ರೋಗ್ರಫಿ ಪಂತ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯ 10 ಕಾಲೇಜಿನ 240 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಗ್ರ ಪ್ರಶಸ್ತಿ ವಿಜೇತ ಮೂರು ತಂಡಗಳಿಗೆ ಶಾಶ್ವತ ಫಲಕದ ಜೊತೆ ಪ್ರಥಮ 25 ಸಾವಿರ, ದ್ವೀತಿಯ 15 ಸಾವಿರ, ತೃತೀಯ 10 ಸಾವಿರ ಬಹುಮಾನವಿದೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಗಮ ಕಲಾವಿದೆರ್‌ನ ಪ್ರಮುಖರಾದ ಶ್ರೇಯಸ್ ಕೋಟ್ಯಾನ್, ರಾಘವೇಂದ್ರ ನಾಯ್ಕ್, ಆನಂದ್ ನಾಯ್ಕ್, ವೈಷ್ಣವಿ ಭಂಡಾರ್ಕರ್ ಉಪಸ್ಥಿತರಿದ್ದರು.