ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿರಾಜ್ಯ ಹೆದ್ದಾರಿಯ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ತನಕದ ೭ ಕಿ.ಮೀ. ವ್ಯಾಪ್ತಿಯಲ್ಲಿ ನಾನಾ ಕಡೆಗಳಲ್ಲಿ ಉದ್ಭವಿಸಿರುವ ಹೊಂಡಗಳಿಂದ ಸಂಚಾರ ಪ್ರಯಾಸವಾಗಿದೆ. ಕುಪ್ಪೆಟ್ಟಿಯಿಂದ ಪಿಲಿಗೂಡುವರೆಗಿನ ರಸ್ತೆಯ ಮಧ್ಯಭಾಗದಲ್ಲಿ ಅನೇಕ ಕಡೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಕೃತಕ ಭಾವಿಯಂತೆ ಭಾರೀ ಪ್ರಮಾಣದ ಹೊಂಡಗಳು ಕಾಣಸಿಗುತ್ತವೆ.
ಈ ಮರಣಗುಂಡಿಗಳು ಅವಘಡಕ್ಕೆ ಕಾರಣವಾಗುತ್ತಿದ್ದು ವಾಹನ ಚಾಲಕರಿಗೆ, ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ಸಂಕಷ್ಟ ತಂದೊಡ್ಡಿವೆ. ದ್ವಿಚಕ್ರ ಸವಾರರು ವಾಹನವನ್ನು ಅಡ್ಡಾದಿಡ್ಡಿಯಾಗಿ ಹೊಂಡ ತಪ್ಪಿಸಿ ಚಲಾಯಿಸಬೇಕಾದ ಪ್ರಮೇಯ ಇದೆ.ಹೊಂಡಗಳನ್ನು ಮುಚ್ಚುವ ಅಥವಾ ಮರು ಡಾಂಬರು ಕಾಮಗಾರಿ ನಡೆದಿಲ್ಲ. ಈ ೭ ಕಿ.ಮೀ ವ್ಯಾಪ್ತಿಯಲ್ಲಿ ನೂರಾರು ಹೊಂಡಗಳಿದ್ದು ಅವುಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಾಗಿದೆ. ನೀರು ತುಂಬಿರುವ ಹೊಂಡಗಳ ಆಳ ಅರಿವಾಗದೆ ಅವುಗಳಲ್ಲಿ ಬಿದ್ದು ಸಾಗುವ ಅನೇಕ ವಾಹನಗಳು ಕೆಟ್ಟುಹೋಗುತ್ತಿವೆ. ಇಲ್ಲಿ ದ್ವಿಚಕ್ರವಾಹನ ಸವಾರರಿಗೆ, ಪಾದಚಾರಿಗಳಿಗೆ ರಸ್ತೆ ಸಮೀಪದ ಅಂಗಡಿ, ಮನೆಗಳಿಗೆ ಕೆಸರಿನ ಸಿಂಚನ ಮಾಮೂಲಾಗಿದೆ.
ಕರಾಯ ಮರಿಪಾದೆ ಗರಡಿ ಬಳಿ ಭಾರೀ ಪ್ರಮಾಣ ಆಳವಾಗಿರುವ ಹೊಂಡಗಳು ಇದ್ದು ವಾಹನಗಳು ಹರಸಾಹಸ ಪಡಬೇಕಾದ ಸನ್ನಿವೇಶ ಇದೆ. ಗುಂಡಿಗಳ ನಡುವೆ ಸಾಲು ಸಾಲಾಗಿ ಬಸ್, ಕಾರುಗಳ ಬಂಪರ್‌ಗಳು ಹಾನಿಯಾಗುತ್ತಿವೆ. ವಾಹನಗಳ ಅಡಿಭಾಗ ತಾಗಿ ನಿರ್ವಹಣೆಯ ವೆಚ್ಚ ದುಪ್ಪಟ್ಟಾಗಿದೆ. ಕುಪ್ಪೆಟ್ಟಿ ಪೇಟೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿದ್ದು ಅದರಲ್ಲಿ ನೀರು ನಿಂತು ಗೋಚರಿಸುತ್ತಿಲ್ಲ. ಕುಪ್ಪೆಟ್ಟಿ ಮಸೀದಿ ಬಳಿ, ಕಲ್ಲೇರಿ ಪೇಟೆ, ಶಿವಗಿರಿ, ಕರಾಯ ಪೆಟ್ರೋಲ್ ಬಂಕ್ ಬಳಿ, ನೇಜಿಕಾರು, ಪೆದಮಲೆ ಹಾಗೂ ಕಡವಿನಬಾಗಿಲಿನ ಬಳಿ ಭಾರೀ ಪ್ರಮಾಣ ಆಳದ ಗೊಂಡಿಗಳಿವೆ. ಪತ್ರಿಕೆಗಳು ವರದಿ ಪ್ರಕಟಿಸಿದರೆ ಇಲಾಖೆ ಒಮ್ಮೆಗೆ ಜಲ್ಲಿ ಹಾಕಿ ಮುಚ್ಚುತ್ತಾರೆ. ಒಂದೇರಡು ಮಳೆಗೆ ಅವುಗಳು ಎದ್ದುಹೋಗಿ ಹೊಂಡಗಳು ಯಥಾಸ್ಥಿತಿ ಕಾಯ್ದುಕೊಳ್ಳುತ್ತಿವೆ.ಗುರುವಾಯನಕೆರೆಯಿಂದ ಪಿಲಿಗೂಡು ತನಕ ಮರು ಡಾಂಬರು ನಡೆದಿರುವುದು ವಾಹನ ಸವಾರಿಗೆ, ಚಾಲಕರಿಗೆ ಅನೂಕೂಲವಾಗಿದೆ. ಪ್ರಯಾಣಿಕರು ಹೊಂಡ ಗುಂಡಿಗಳ ರಸ್ತೆ ಮೇಲಿನ ಪ್ರಯಾಣದಿಂದಾಗಿ ಸುಸ್ತಾಗುತ್ತಿದ್ದಾರೆ. ‘ಅಜೀರ್ಣ ಹೊಟ್ಟೆಯುಬ್ಬರ, ಹೊಟ್ಟೆಯ ಮುಂತಾದ ಸಮಸ್ಯೆಗಳಿಗೆ ಪರಿಹಾರ ಈ ರಸ್ತೆಯಲ್ಲಿ ದೊರೆಯುತ್ತವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಭರಿತ ಸಂದೇಶ ವೈರಲ್ ಆಗುತ್ತಿದೆ.ಈ ರಸ್ತೆಯ ನಿರ್ವಹಣೆಗಾಗಿ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಪ್ರಾಥಮಿಕ ಹಂತದ ಕೆಲಸಗಳನ್ನು ಮಾಡಲಾಗುವುದು.
-ಬಕ್ಕಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಬೆಳ್ತಂಗಡಿ.