ಸಾರಾಂಶ
ತಾಲೂಕಿನ ಗಡಿಭಾಗದಲ್ಲಿರುವ ಕುರುಬರಹಳ್ಳಿ ಪಾಳ್ಯದ ನಿವಾಸಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕನ್ನಡಪ್ರಭವಾರ್ತೆ ತುರುವೇಕೆರೆ
ಸ್ವಾಮಿ ನಮ್ಮೂರಿಗೊಂದು ಪೋಸ್ಟ್ ಆಫೀಸ್ ಮಂಜೂರು ಮಾಡಿ ಕೊಡಿ. ನಮ್ಮೂರಲ್ಲಿ ಹತ್ತಾರು ಜನ ವಿಕಲ ಚೇತನರಿದ್ದಾರೆ. ಪೋಸ್ಟ್ ಆಫೀಸ್ ಸೌಲಭ್ಯ ಪಡೆಯಬೇಕೆಂದರೆ ಸುಮಾರು ಹತ್ತು ಕಿಮೀ ದೂರ ಹೋಗಬೇಕಿದೆ ಎಂದು ತಾಲೂಕಿನ ಗಡಿಭಾಗದಲ್ಲಿರುವ ಕುರುಬರಹಳ್ಳಿ ಪಾಳ್ಯದ ನಿವಾಸಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಾಲೂಕಿನ ದಂಡಿನಶಿವರ ಹೋಬಳಿ ಕುರುಬರಹಳ್ಳಿಯಲ್ಲಿ ಸುಮಾರು ೮೦೦ ಮನೆಗಳಿವೆ. ತಾಲೂಕಿನ ಗಡಿ ಗ್ರಾಮವಾದ ಕುರುಬರಹಳ್ಳಿಯಲ್ಲಿ ೧೫೦೦ ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈಗ ಸಂಪಿಗೆ ಹೊಸಳ್ಳಿಯಲ್ಲಿ ಅಂಚೆಕಚೇರಿ ಇದ್ದು ಪ್ರತಿಯೊಂದು ಕೆಲಸಕ್ಕೆ ಸುಮಾರು 8-10 ಕಿಮೀ ತೆರಳಬೇಕಿದೆ. ವಿಕಲಚೇತನರಿಗೆ ತಿಂಗಳ ಮಾಸಾಸನ ಪಡೆಯಲು ಕಷ್ಟವಾಗಿದೆ. ಈ ಮೊದಲು ಮನಿಯಾರ್ಡರ್ ಮೂಲಕ ಹಣವನ್ನು ನೀಡಲಾಗುತ್ತಿತ್ತು. ಆದರೆ ಈಗ ಫಲಾನುಭವಿಗಳ ಖಾತೆಗಳಿಗೆ ಹಣ ಹಾಕುವುದರಿಂದ ಫಲಾನುಭವಿಗಳು ಸಂಪಿಗೆ ಹೊಸಳ್ಳಿಗೆ ಅಂಚೆ ಕಚೇರಿಗೆ ತೆರಳಿ ಹಣ ತರುವುದು ಕಷ್ಟವಾಗುತ್ತಿದೆ. ಅದಲ್ಲದೇ ಸರ್ಕಾರದಿಂದ ಬರುವ ಪಿಂಚಣಿಗಳು ಸಹ ಅಂಚೆ ಕಚೇರಿಯ ಮೂಲಕ ಪಡೆಯುವುದರಿಂದ ನೂರಾರು ಹಿರಿಯ ಫಲಾನುಭವಿಗಳು ಅಂಚೆ ಕಚೇರಿಗೆ ತೆರಳಬೇಕಿದೆ. ಹಿರಿಯರು ಜೀವಗಳು ಸುಮಾರು ದೂರ ತೆರಳುವುದು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ಗಮನ ಹರಿಸಿ ನಮ್ಮ ಗ್ರಾಮದಲ್ಲಿಯೇ ನೂತನವಾದ ಅಂಚೆ ಕಚೇರಿಯನ್ನು ತೆರೆಯಬೇಕು ಎಂದು ಗ್ರಾಮದ ಮುಖಂಡರಾದ ನಟರಾಜು, ಕೆ.ರಾಮಕೃಷ್ಣಯ್ಯ, ರವಿಕುಮಾರ್ ಒತ್ತಾಯಿಸಿದ್ದಾರೆ.ಕೋಟ್..
ನಾವು ಪ್ರತಿ ತಿಂಗಳು ಸಂಪಿಗೆ ಹೊಸಳ್ಳಿ ಅಂಚೆ ಕಚೇರಿಯಲ್ಲಿ ತೆರಳಿ ಮಾಸಾಶನವನ್ನು ಪಡೆಯಬೇಕಿದೆ. ನಾನು ಮತ್ತು ನನ್ನ ಹೆಂಡತಿ ಇಬ್ಬರು ಅಂಧರಾಗಿದ್ದೇವೆ. ನಾವುಗಳು ಪ್ರತಿ ತಿಂಗಳು ಆಟೋ ಇಲ್ಲವೇ ಗ್ರಾಮಸ್ಥರ ಸಹಾಯ ಪಡೆದು ತೆರಳಿ ಹಣ ಪಡೆಯುವಂತಾಗಿದೆ. ನಮಗೆ ಪ್ರತಿ ತಿಂಗಳು ಸಂಪಿಗೆ ಹೊಸಳ್ಳಿಗೆ ಅಂಚೆ ಕಚೇರಿಗೆ ಹೋಗಿ ಬರುವುದು ಕಷ್ಟವಾಗುತ್ತಿದೆ. ಹಾಗಾಗಿ ನಮ್ಮೂರಲ್ಲೇ ಪೋಸ್ಟ್ ಆಫೀಸ್ ತೆರೆದರೆ ಎಲ್ಲರಿಗೂ ಒಳ್ಳೆಯದು. ವಯೋವೃದ್ಧ ಕೆಂಪಯ್ಯ. ವಿಕಲಚೇತನರು.