ಕಾವೇರಿ: ಕೇಂದ್ರ ಸಚಿವ ಶೇಖಾವತ್‌ಭೇಟಿಯಾದ ಕುರುಬೂರು ನಿಯೋಗ

| Published : Oct 10 2023, 01:00 AM IST

ಸಾರಾಂಶ

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ನಿಯೋಗ ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿತು. ಬರಗಾಲ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಅವೈಜ್ಞಾನಿಕವಾಗಿದ್ದು, ಅದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿತು.
ನವದೆಹಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ನಿಯೋಗ ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿತು. ಬರಗಾಲದ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಅವೈಜ್ಞಾನಿಕವಾಗಿದ್ದು, ಅದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿತು. ನಂತರ ಮಾತನಾಡಿದ ರೈತ ಮುಖಂಡ ಕುರಬೂರು ಶಾಂತ ಕುಮಾರ್‌, ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ ಅವರ ಜತೆಗೆ ಕಾವೇರಿ ನೀರಿನ ಸಂಕಷ್ಟ, ರಾಜ್ಯದಲ್ಲಿ ಎದುರಾಗಿರುವ ಬರಗಾಲ, ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು. ಸದ್ಯ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದಿಂದ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಯಿತು. ನಮ್ಮ ಆತಂಕಗಳಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು. ------- ಮಾತುಕತೆ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆಯೂ ಒತ್ತಿ ಹೇಳಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ಜನ ಸಾಮಾನ್ಯರ ಬಂದ್ ಅನ್ನೂ ಅವರ ಗಮನಕ್ಕೆ ತಂದಿದ್ದೇವೆ. ಮುಂದೆ ಲೋಕಸಭೆ ಚುನಾವಣೆ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಕುರಿತೂ ಪ್ರಸ್ತಾಪಿಸಿದ್ದೇವೆ ಎಂದರು. ತಮಿಳುನಾಡು ಸರ್ಕಾರ ವಿಧಾನಸಭೆ ಅಧಿವೇಶನದಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ನಿರ್ಣಯ ತೆಗೆದುಕೊಂಡಿದೆ. ರಾಜ್ಯ ಸರ್ಕಾರವೂ ವಿಶೇಷ ಅಧಿವೇಶನ ಕರೆದು ನಿರ್ಣಯ ಮಾಡಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಇದೇ ವೇಳೆ ಶಾಂತಕುಮಾರ್‌ ಆಗ್ರಹಿಸಿದರು. ಕನ್ನಡಪರ ಹೋರಾಟಗಾರರಾದ ಮೋಹನ್ ದಾಸರಿ ಇತರರಿದ್ದರು.