ಹೂವಿನಹಡಗಲಿ: ಹರ ಹರ ಮಹಾದೇವ... ಬಸವಣ್ಣ ದೊರೆಯೇ ನಿನಗಾರು ಸರಿಯೇ? ಸರಿ ಸರಿ ಅಂದವರ ಹಲ್ಲು ಮುರಿಯೇ ಬಹು ಪರಾಕ್...ಎಂಬ ದೇವರ ನಾಮ ಸ್ಮರಣೆಯೊಂದಿಗೆ, ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ, ಲಕ್ಷಾಂತರ ಭಕ್ತ ಸಾಗರ ಮಧ್ಯೆ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಮಂಗಳವಾರ ಸಂಜೆ 4.30ಕ್ಕೆ ಬಸವೇಶ್ವರ ದೇವಸ್ಥಾನದಿಂದ ಬೆಳ್ಳಿ ಬಸವೇಶ್ವರ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಇಡಲಾಯಿತು. ಉತ್ಸವ ಮೂರ್ತಿ ಇಡಲಾಗುವ ಪ್ರಭಾವಳಿ ಪಾದಗಟ್ಟೆಗೆ ಬಂದು ತಲುಪಿದ ಬಳಿಕ, ಶಿವರಾತ್ರಿ ಅಮಾವಾಸ್ಯೆ ದಿನ, ಮಾಘ ನಕ್ಷತ್ರ ಘಳಿಗೆ ಕಾಲ ಕೂಡಿ ಬಂದಾಗ ರಥೋತ್ಸವಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸುವ ಮೂಲಕ ಭಕ್ತರ ನಾಮ ಸ್ಮರಣೆಯೊಂದಿಗೆ ತೇರನ್ನು ಎಳೆಯಲು ಚಾಲನೆ ನೀಡಲಾಯಿತು.ತೇರಿಗೆ ವಿವಿಧ ತಳಿರು ತೋರಣಗಳು ಹಾಗೂ ಭಾರಿ ಗಾತ್ರದ ರುದ್ರಾಕ್ಷಿ, ಹೂ ಮಾಲೆಗಳಿಂದ ಅಲಂಕರಿಸಲಾಗಿತ್ತು. ಸಮಾಳ, ನಂದಿಕೋಲು, ಹಲಗೆ, ಡೊಳ್ಳು ಸೇರಿದಂತೆ ಮಂಗಳ ವಾದ್ಯಗಳು ರಥೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಸುಗ್ಗಿಯ ಕಾಲ ಮುಗಿದ ಬಳಿಕ ಬದುಕಿನಲ್ಲಿ ಬಿಡುವು ಮಾಡಿಕೊಂಡ ಸಮಯದಲ್ಲಿ ಆರಂಭವಾಗುವ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು ಹಳಿ ಬಂಡಿ, ಸವಾರಿ ಕೋಲಿನ ಬಂಡಿಗಳನ್ನು ಸಿಂಗರಿಸಿಕೊಂಡು ಜಾತ್ರೆಗೆ ಬಂದಿದ್ದರು.ದೇವರ ಕೃಪೆಗೆ ಪಾತ್ರರಾಗಲು ಜಾತ್ರೆಗೆ ಬಂದ ಭಕ್ತರು ತಮ್ಮ ಎತ್ತುಗಳನ್ನು ಜೂಲಾ, ಗೆಜ್ಜೆಸರ, ಬಣ್ಣ ಬಣ್ಣದ ಬಲೂನ್, ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿಕೊಂಡು, ಎತ್ತಿನ ಮೆರವಣಿಗೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಜಾತ್ರೆಗೆ ಬಂದ ಭಕ್ತರು ದೀಡ್ ನಮುಸ್ಕಾರ ಹಾಕಿ ದೇವರಿಗೆ ಹರಕೆ ತೀರಿಸಿದರು. ಕುರುವತ್ತಿ ಬಸವೇಶ್ವರ ಸಿಂಹಾಸನ ಕಟ್ಟೆಯ ಮುಂಭಾಗದಲ್ಲಿ ಸಾವಿರಾರು ಭಕ್ತರು ಕೊಬ್ಬರಿಯನ್ನು ಸುಟ್ಟು ಹರಕೆ ತೀರಿಸಿದರು.
ಹೂವಿನಹಡಗಲಿ, ದಾವಣಗೆರೆ, ರಾಣಿಬೆನ್ನೂರು, ಹುಬ್ಬಳ್ಳಿ, ಶಿರಹಟ್ಟಿ, ಲಕ್ಷ್ಮೇಶ್ವರ, ಬ್ಯಾಡಗಿ, ಹರಿಹರ, ಬೆಳಗಾವಿ, ಧಾರವಾಡ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ 5 ರಿಂದ 6 ಲಕ್ಷ ಭಕ್ತರು ಸಾಕ್ಷಿಯಾಗಿದ್ದರು.
ಉತ್ತರ ಕರ್ನಾಟಕದ ಭಕ್ತರನ್ನೇ ಹೆಚ್ಚು ಸೆಳೆಯುವ ಕುರುವತ್ತಿ ಬಸವೇಶ್ವರ ಜಾತ್ರೆಗೆ ಬಂದ ಭಕ್ತರು, ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ರಥೋತ್ಸವ ಸಂದರ್ಭದಲ್ಲಿ ಯಾವುದೇ ಅವಘಡ ನಡೆಯದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ತೇರು ಬೀದಿಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಸರಗಳ್ಳತನ, ಪಿಕ್ ಪಾಕೀಟ್, ಇಸ್ಪೀಟ್ ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಗೂ ಸಂಚಾರಿ ದಟ್ಟಣೆ ತಡೆಗಟ್ಟಲು ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.ಜಾತ್ರೆಗೆ ಬರುವ ಭಕ್ತರಿಗೆ ದಾವಣಗೆರೆ, ಹಾವೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಧಾರವಾಡ, ಗದಗ, ಹೂವಿನಹಡಗಲಿ, ಹರಿಹರ ಸೇರಿದಂತೆ ಇತರೆ ಸಾರಿಗೆ ಘಟಕಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ಪ್ರಯುಕ್ತ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ, ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು.
ತೇರು ಬೀದಿ ತುಂಬೆಲ್ಲ ವಾಹನ ನಿಲುಗಡೆ!ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ರಥೋತ್ಸವ ಸಾಗಿ ಬರುವ ತೇರು ಬೀದಿಯಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಿದ್ದಾರೆ. ಜತೆಗೆ ಪೊಲೀಸ್ ಮತ್ತು ಇತರೆ ಇಲಾಖೆಯ ವಾಹನಗಳ ನಿಲುಗಡೆಯಿಂದ ತೇರು ನೋಡಲು ಬರುವ ಭಕ್ತರಿಗೆ ತೊಂದರೆ ಉಂಟಾಗಿತ್ತು. ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ತೇರು ನೋಡಲು ಆಗಮಿಸಿದ್ದರು. ಆಗದರೆ, ರಥ ಬೀದಿಯಲ್ಲಿ ಸರ್ಕಾರಿ ವಾಹನಗಳೇ ತುಂಬಿದ್ದರಿಂದ ದೂರದಿಂದಲೇ ನಿಂತು ನೋಡುವಂತಾಯಿತು. ರಥೋತ್ಸವಕ್ಕೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಪಿಡಿಒ ಗುತ್ತೆಪ್ಪ, ಎಸ್ಪಿ ಜಾಹ್ವವಿ, ಸಿಪಿಐ ಮಲ್ಲಪ್ಪ ಸೇರಿದಂತೆ ಇತತರಿದ್ದರು.