ಸಾರಾಂಶ
ಶತಮಾನಗಳ ಕಾಲ ಇತಿಹಾಸವಿರುವ ಕುರುವತ್ತಿ ಬಸವೇಶ್ವರ ಜಾತ್ರೆಯು ಗ್ರಾಮೀಣ ಸೊಗಡಿನ ಪರಂಪರೆ ಇನ್ನು ಜೀವಂತವಾಗಿದೆ.
ಹೂವಿನಹಡಗಲಿ: ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮ ಸಿದ್ಧವೆನಿಸಿದ ಪಶ್ಚಿಮ ವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರಾ ನದಿ ತೀರದ ಪವಿತ್ರ ಪುಣ್ಯ ಭೂಮಿ ಕುರುವತ್ತಿ ಶ್ರೀಬಸವೇಶ್ವರ, ಶ್ರೀಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಫೆ. 22 ರಿಂದ ಮಾ.2 ರವರೆಗೆ ಜರುಗಲಿದೆ.
ಶ್ರೀ ಬಸವೇಶ್ವರ, ಶ್ರೀಮಲ್ಲಿಕಾರ್ಜುನ ದೇವರಿಗೆ ಕಂಕಣಧಾರಣ ಸೇವೆ ನಂತರ ಉತ್ಸವ ಮೂರ್ತಿಯು ಪ್ರಭಾವಳಿಯಲ್ಲಿ ತುಂಗಭದ್ರಾ ನದಿಗೆ ತೆರಳಿ ಸುಕ್ಷೇತ್ರದ ಸಿಂಹಾಸನ ಕಟ್ಟೆಯವರೆಗೂ ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಗುತ್ತಿದೆ.ಫೆ. 26 ಮಹಾ ಶಿವರಾತ್ರಿಯಂದು ಶ್ರೀಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀಬಸವೇಶ್ವರ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಫೆ. 28 ರಂದು ಶುಕ್ರವಾರ ಮಹಾಶಿವರಾತ್ರಿ ಅಮವಾಸ್ಯೆ ದಿನ ಸಂಜೆ 4.30ಕ್ಕೆ ಸಂಭ್ರಮದ ರಥೋತ್ಸವ ನಡೆಯಲಿದೆ.
ಶತಮಾನಗಳ ಕಾಲ ಇತಿಹಾಸವಿರುವ ಕುರುವತ್ತಿ ಬಸವೇಶ್ವರ ಜಾತ್ರೆಯು ಗ್ರಾಮೀಣ ಸೊಗಡಿನ ಪರಂಪರೆ ಇನ್ನು ಜೀವಂತವಾಗಿದೆ. ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆಗೆ ಹುಬ್ಬಳ್ಳಿ, ದಾವಣಗೆರೆ, ಹರಿಹರ, ಗದಗ, ರಾಣಿಬೆನ್ನೂರು, ಧಾರವಾಡ, ಹಾವೇರಿ, ಹೂವಿನಹಡಗಲಿ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ವಿಜಯನಗರ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ.ಮಾ. 1ರಂದು ಸಂಜೆ 5 ಗಂಟೆಗೆ ಓಕುಳಿ ಉತ್ಸವವು ಸಿಂಹಾಸನ ಕಟ್ಟೆಯ ಮುಂದೆ ನಡೆಯಲಿದೆ. ಮಾ.2 ರಂದು ಉದಯ ಉತ್ಸವ ಮೂರ್ತಿಯು ಸಿಂಹಾಸನ ಕಟ್ಟೆಯಿಂದ ದೇವಸ್ಥಾನಕ್ಕೆ ಆಗಮಿಸಿದ ನಂತರ ಮಹಾ ಮಂಗಳಾರತಿ ನಡೆಯಲಿದೆ.
ಜಾತ್ರೆಗೆ ಸಿದ್ಧತೆ: ಈಗಾಗಲೇ ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕುಡಿವ ನೀರು, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯ, ಜಾತ್ರೆಗೆ ಬಂದ ವಾಹನಗಳ ನಿಲುಗಡೆ ವ್ಯವಸ್ಥೆ, ವಿದ್ಯುತ್ ದೀಪಗಳ ಅಲಂಕಾರ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.