ಹೂವಿನಹಡಗಲಿ: ತಾಲೂಕಿನ ಕುರುವತ್ತಿ ಬಸವೇಶ್ವರ ಜಾತ್ರೆಯಲ್ಲೂ ಹರಕೆ ಹೊತ್ತ ಮಹಿಳೆಯರು ಬಯಲಿನಲ್ಲೇ ಸ್ನಾನ ಮಾಡಿದ್ದು, ಬಟ್ಟೆ ಬದಲಾವಣೆಗೆ ಮರೆ ಮಾಡುವಲ್ಲಿ ಮುಜರಾಯಿ ಇಲಾಖೆ ಮತ್ತೆ ತನ್ನ ನಿರ್ಲಕ್ಷ್ಯ ಮುಂದುವರಿಸಿದೆ.
ಹೌದು, ಕಳೆದ ಮೈಲಾರ ಜಾತ್ರೆಯಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳದೇ ಮುಜರಾಯಿ ಇಲಾಖೆ ತನ್ನ ಹಠಮಾರಿ ಧೋರಣೆಗೆ ಮಣೆ ಹಾಕಿದೆ.ಕುರುವತ್ತಿ ಬಸವೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸಾವಿರಾರು ಮಹಿಳೆಯರು ತಾವು ಹೊತ್ತಿದ್ದ ಹರಕೆ ತೀರಿಸಿದ ಬಳಿಕ, ದೇವಸ್ಥಾನದ ಆವರಣದಲ್ಲಿ ಸ್ನಾನ ಮಾಡಿದರು. ದೇವರ ದರ್ಶನಕ್ಕೆ ನೆರೆದಿದ್ದ ಭಕ್ತರ ನಡುವೆ ಮೈ ಮೇಲಿನ ಬಟ್ಟೆ ಬದಲಾಯಿಸಲು ಹಿಂದೆ- ಮುಂದೆ ನೋಡಿದರು. ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜರುಗಿದ ಸಭೆಯ ಠರಾವಿನಂತೆ ಮುಜರಾಯಿ ಇಲಾಖೆ ಕೈಗೊಳ್ಳಬೇಕಿದ್ದ ಕೆಲಸಗಳನ್ನು ಕೈಚೆಲ್ಲಿದ್ದಾರೆ. ಇದರಿಂದ ಮಹಿಳೆಯರು ನೇರವಾಗಿ ನದಿಯಲ್ಲಿ ಸ್ನಾನ ಮಾಡಿದ್ದು, ಅಲ್ಲಿಯೂ ಬಟ್ಟೆ ಬದಲಾವಣೆಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಭಕ್ತರು ಅವ್ಯವಸ್ಥೆಗೆ ಹಿಡಿಶಾಪ ಹಾಕಿದರು.
ಮಹಿಳೆಯರ ಶೌಚಾಲಯ ಕೊಠಡಿಗೆ ಬೀಗ:ಕುರುವತ್ತಿ ಬಸವೇಶ್ವರ ದೇವಸ್ಥಾನದ ಯಾತ್ರಾ ನಿವಾಸದಲ್ಲಿ ಮಹಿಳೆಯರ ಶೌಚಾಲಯಕ್ಕೆ ಮುಜರಾಯಿ ಇಲಾಖೆಯವರು ಬೀಗ ಹಾಕಿದ್ದರು. ಇದರಿಂದ ಮಹಿಳೆಯರು ನದಿ ತೀರದಲ್ಲೇ ತಂಬಿಗೆ ಹಿಡಿದು ಬಯಲು ಶೌಚಕ್ಕೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ತುಂಗಭದ್ರಾ ನದಿ ತಟವೆಲ್ಲ ಹೊಲಸಿನಿಂದ ಕೂಡಿತ್ತು. ನದಿ ಸ್ನಾನಕ್ಕೆ ಹೋಗುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು.
ಶುದ್ದ ಕುಡಿವ ನೀರಿನ ಘಟಕ ಬಂದ್:
ಕುರುವತ್ತಿ ಬಸವೇಶ್ವರ ದೇಗುಲ ಆವರಣದಲ್ಲಿ ಶುದ್ಧ ಕುಡಿವ ನೀರಿನ ಘಟಕವಿದ್ದರೂ ಭಕ್ತರ ನೀರಿನ ದಾಹ ನೀಗಿಸಲಿಲ್ಲ. ದೇವಸ್ಥಾನದ ಯಾತ್ರಾ ನಿವಾಸದಲ್ಲಿಯೂ ಶುದ್ಧ ಕುಡಿವ ನೀರಿನ ಘಟಕ ಸಂಪೂರ್ಣ ಬಂದ್ ಆಗಿತ್ತು. ಈ ಎರಡು ಘಟಕಗಳು ಮುಜರಾಯಿ ಇಲಾಖೆಗೆ ಸಂಬಂಧಿಸಿವೆ. ದೇವಸ್ಥಾನದ ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಭಕ್ತರು ನೀರಿಗಾಗಿ ಪರದಾಡಿದರು. ಇತ್ತ ಕುರುವತ್ತಿ ಗ್ರಾಪಂನ ಎರಡು ಶುದ್ಧ ಕುಡಿವ ನೀರಿನ ಘಟಕಕ್ಕೆ ಭಕ್ತರು ಮೊರೆ ಹೋದರು.
ಹರಕೆ ತೀರಿಸಿದ ಮಹಿಳೆಯರು ಸ್ನಾನ ಮಾಡಲು ಹಾಗೂ ಬಟ್ಟೆ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಶುದ್ಧ ಕುಡಿವ ನೀರಿನ ಘಟಕ ಬಂದ್ ಆಗಿದ್ದರೆ ದುರಸ್ತಿ ಮಾಡಬೇಕಿತ್ತು. ಈ ಕುರಿತು ಕ್ರಮಕ್ಕೆ ಮುಂದಾಗುತ್ತೇವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.ಡಿಸಿ, ಎಸ್ಪಿ ಸಹಿತ ಮಹಿಳಾ ಅಧಿಕಾರಿಗಳಿದ್ದರೂ ಮಹಿಳೆಯರಿಗಿಲ್ಲ ಅನುಕೂಲ: ಜಿಲ್ಲಾಡಳಿತದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಮುಜರಾಯಿ ಇಲಾಖೆ ಎಸಿ ಮೂವರು ಮಹಿಳಾ ಅಧಿಕಾರಿಗಳಿದ್ದರೂ ಯಾತ್ರಾ ನಿವಾಸದ ಮಹಿಳಾ ಶೌಚಾಲಯಗಳು ಮುಚ್ಚಲ್ಪಟ್ಟಿರುವುದು ಖೇದಕರ ಸಂಗತಿ. ದೇವಸ್ಥಾನದ ಅಧಿಕಾರಿಗಳು ಆದಾಯ ನಿರೀಕ್ಷೆ ಮಾತ್ರ ಮಾಡುತ್ತಾರೆ. ಆದರೆ ಮಹಿಳೆಯರಿಗೆ ಬಟ್ಟೆ ಬದಲಾವಣೆಗೆ ವ್ಯವಸ್ಥೆ ಇಲ್ಲದಿರುವುದು ನೋವಿನ ಸಂಗತಿ ಎನ್ನುತ್ತಾರೆ ಭಕ್ತರು.