ಕುಶಾಲನಗರ: ಭಾರತ್‌ ರೈಸ್‌ ವಿತರಣೆಗೆ ಚಾಲನೆ

| Published : Mar 06 2024, 02:22 AM IST

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಯೋಜನೆ ಜಾರಿಗೆ ಬಂದು ಒಂದು ತಿಂಗಳಾಗಿದೆ. ಆದರೂ ಕೂಡ ಕೊಡಗು ಜಿಲ್ಲೆಯ ಎಲ್ಲ ಕಡೆಗಳಲ್ಲಿ ಈ ಅಕ್ಕಿ ಸಿಗುತ್ತಿಲ್ಲ. ಬದಲಾಗಿ ಜಿಲ್ಲೆಯ ಒಂದೊಂದು ಪ್ರದೇಶಗಳಲ್ಲಿ ಮಾತ್ರ ಮೊಬೈಲ್ ವ್ಯಾನ್‌ಗಳ ಮೂಲಕ ಅಕ್ಕಿ ವಿತರಣೆಯಾಗುತ್ತಿದೆ. ಕುಶಾಲನಗರದಲ್ಲಿ ಮಂಗಳವಾರ ಅಕ್ಕಿ ವಿತರಣೆ ಪ್ರಾರಂಭವಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಭಾರತ್ ರೈಸ್ ವಿತರಣೆ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಕುಶಾಲನಗರ ಕಾರು ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಹತ್ತು ಕೆ.ಜಿ. ಅಕ್ಕಿಯ ಬ್ಯಾಗ್ ಜನರಿಗೆ ವಿತರಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಥಮ ಹಂತದಲ್ಲಿ ನಾಲ್ಕು ಸಾವಿರ ಬ್ಯಾಗ್ ಗಳಷ್ಟು ಅಕ್ಕಿಯನ್ನು ಟ್ರಕ್ ಮೂಲಕ ಕುಶಾಲನಗರಕ್ಕೆ ತರಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮುಂದಿನ ದಿನಗಳಲ್ಲಿ ಭಾರತ್ ಬೇಳೆ ಕೂಡ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದರು.

ಬೆಳಗಿನಿಂದ ಸಂಜೆ ತನಕ ಸಾವಿರಾರು ಜನರು ಸಾಲಾಗಿ ನಿಂತು ಟೋಕನ್ ಪಡೆಯುವ ಮೂಲಕ ತಮಗೆ ಅಗತ್ಯವಿರುವ ಅಕ್ಕಿ ಬ್ಯಾಗ್ ಗಳನ್ನು ಪಡೆದುಕೊಂಡ ದೃಶ್ಯ ಕಂಡು ಬಂತು.

(ಕೊಡಗಿನ ಎಲ್ಲ ಕಡೆ ಸಿಗುತ್ತಿಲ್ಲ ಭಾರತ್ ಅಕ್ಕಿ:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಯೋಜನೆ ಜಾರಿಗೆ ಬಂದು ಒಂದು ತಿಂಗಳಾಗಿದೆ. ಆದರೂ ಕೂಡ ಕೊಡಗು ಜಿಲ್ಲೆಯ ಎಲ್ಲ ಕಡೆಗಳಲ್ಲಿ ಈ ಅಕ್ಕಿ ಸಿಗುತ್ತಿಲ್ಲ. ಬದಲಾಗಿ ಜಿಲ್ಲೆಯ ಒಂದೊಂದು ಪ್ರದೇಶಗಳಲ್ಲಿ ಮಾತ್ರ ಮೊಬೈಲ್ ವ್ಯಾನ್‌ಗಳ ಮೂಲಕ ಅಕ್ಕಿ ವಿತರಣೆಯಾಗುತ್ತಿದೆ.

ಅಂಗಡಿಗಳಲ್ಲಿ ಅಕ್ಕಿಗೆ ಕೆ.ಜಿಗೆ 60 ರು.ನಿಂದ 90 ರು. ಬೆಲೆ ಇದೆ. ಆದರೆ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಕೇವಲ 29 ರು.ಗೆ ಅಕ್ಕಿ ಕೊಡುವ ಯೋಜನೆಗೆ ಜನರು ಕಾಯುತ್ತಿದ್ದಾರೆ. ಆದರೂ ಕೂಡ ಈ ಅಕ್ಕಿ ಕೊಡಗಿನಲ್ಲಿ ಎಲ್ಲ ಕಡೆಗಳಲ್ಲಿ ಸಿಗುತ್ತಿಲ್ಲ ಎಂಬ ದೂರುಗಳಿವೆ.

ಕೊಡಗಿನಲ್ಲಿ ಭಾರತ್ ಅಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಅಕ್ಕಿ ಬಂದ ಕೂಡಲೇ ಕ್ಷಣ ಮಾತ್ರದಲ್ಲೇ ಖಾಲಿಯಾಗುತ್ತಿದೆ. ಆದ್ದರಿಂದ ಕೊಡಗಿನ ಎಲ್ಲ ಕಡೆ ವಿತರಿಸುವಂತಾಗಬೇಕಿದೆ. ಇದರಿಂದ ಸರ್ಕಾರದ ಯೋಜನೆ ಜನರಿಗೆ ತಲುಪಲು ಸಾಧ್ಯ.

ಈ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಪ್ರತಿಕ್ರಿಯಿಸಿದ್ದು, ಭಾರತ್ ಅಕ್ಕಿ ಈಗಾಗಲೇ ಕೊಡಗಿನ ಕೆಲವು ಕಡೆಗಳಲ್ಲಿ ದೊರಕುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ದೊರಕುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.