ಕುಶಾಲನಗರ: ಡಿ.2ರಂದು ‘ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ’ ಸಂಭ್ರಮ

| Published : Oct 16 2024, 12:49 AM IST

ಕುಶಾಲನಗರ: ಡಿ.2ರಂದು ‘ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ’ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಂಗೀತ ರಸಮಂಜರಿ, ಸಾರ್ವಜನಿಕರಿಗೆ ಅನ್ನದಾನ, 14 ವರ್ಷದೊಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು 14 ವರ್ಷ ಮೇಲ್ಪಟ್ಟವರಿಗೆ ತಾಲೂಕು ಮಟ್ಟದ ಮುಕ್ತ ನೃತ್ಯೋತ್ಸವ ಸ್ಪರ್ಧೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಡಿ.2ರಂದು ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಂಭ್ರಮ’ ಶೀರ್ಷಿಕೆಯಡಿ ಕರವೇ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಕ.ರ.ವೇ. ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ತೆರೆದ ಜೀಪಿನಲ್ಲಿ ಕಾವೇರಿ ಪ್ರತಿಮೆ ಬಳಿಯಿಂದ ವೇದಿಕೆ ವರೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು. ಸಭಾ ಕಾರ್ಯಕ್ರಮ, ಸಂಗೀತ ರಸಮಂಜರಿ, ಸಾರ್ವಜನಿಕರಿಗೆ ಅನ್ನದಾನ, 14 ವರ್ಷದೊಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು 14 ವರ್ಷ ಮೇಲ್ಪಟ್ಟವರಿಗೆ ತಾಲೂಕು ಮಟ್ಟದ ಮುಕ್ತ ನೃತ್ಯೋತ್ಸವ ಸ್ಪರ್ಧೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕಿಂತ ಒಂದು‌ ವಾರ ಮುಂಚಿತವಾಗಿ ನ.24ರಂದು ಕರವೇ ಮಹಿಳಾ ಘಟಕ ವತಿಯಿಂದ ಮಹಿಳೆಯರಿಗೆ ರಂಗೋಲಿ ಮತ್ತಿತರ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಕರವೇ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಮಾತನಾಡಿ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷನಾಗಿ ನಿಯೋಜನೆಗೊಂಡ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದು ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಕರವೇ ಪದಾಧಿಕಾರಿಗಳು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎ. ನಾಗೇಗೌಡ ಮಾತನಾಡಿ, ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ದಿನೇಶ್, ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರು, ಪದಾಧಿಕಾರಿ ಆನಂದ್ ಇದ್ದರು.