ಕುಶಾಲನಗರ: ದೀಪ ಪ್ರಜ್ವಲನ ಆಚರಣೆ

| Published : Nov 05 2024, 12:37 AM IST

ಸಾರಾಂಶ

ದೀಪ ಪ್ರಜ್ವಲನ ಆಚರಣೆ ನಡೆಯಿತು. ಪ್ರಸಾದ ವಿತರಣೆಯೊಂದಿಗೆ ಸಹಭೋಜನ ಜರುಗಿತು. ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಅಂಗವಾಗಿ ಕುಶಾಲನಗರದ ಆದಿ ದ್ರಾವಿಡ ಕಾಲೋನಿಯ ಪಟ್ಟಾಲಮ್ಮ ದೇವಸ್ಥಾನ ಮತ್ತು ಬೈಚನಹಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ ದೀಪ ಪ್ರಜ್ವಲನ ಆಚರಣೆ ನಡೆಯಿತು.

ಬೈಚನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗರ್ಭಗುಡಿಯಿಂದ ಕೊಟ್ಟ ದೀಪವನ್ನು ದಲಿತ ಬಂಧುಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಅಂಬೇಡ್ಕರ್ ಕಾಲೋನಿಯ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಟ್ಟು ಅಲ್ಲಿಂದ ಮನೆ ಮನೆಗೆ ದೀಪವನ್ನು ಬೆಳಗಿಸಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯ ರಾಮದಾಸ್ ಹಾಗೂ ಸಾಮರಸ್ಯ ವೇದಿಕೆಯ ಭರತ್ ಮಾಚಯ್ಯ ಮಾತನಾಡಿ, ತಲಾ ತಲಾಂತರದಿಂದ ಬಂದಿರುವ ಅಸ್ಪೃಶ್ಯತೆ, ಮೇಲು ಕೀಳು ಜಾತಿ ಭಾವನೆಯನ್ನು ದೂರಗೊಳಿಸಲು ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾಲೋನಿಯಲ್ಲಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಜಾತಿ ವ್ಯವಸ್ಥೆಯನ್ನು ತೊಲಗಿಸುವ ಚಿಂತನೆ ಇದಾಗಿದೆ ಎಂದರು.

ನಂತರ ದೇವಸ್ಥಾನದ ಪ್ರಸಾದ ವಿತರಣೆಯೊಂದಿಗೆ ಸಹಭೋಜನ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತೀಯ ವಿಭಾಗ ಸಂಯೋಜಕ ಮಧುಸೂದನ್, ಪರ್ಯಾವರಣ ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹ ರಮೇಶ್, ಸಂಯೋಜಕ ಜನಾರ್ಧನ್, ಸಾಮರಸ್ಯ ವೇದಿಕೆ ಜಿಲ್ಲಾ ಸಂಯೋಜಕ ಹರೀಶ್ ತಮ್ಮಯ್ಯ, ಪ್ರಮುಖರಾದ ಸದಾಶಿವ, ರವೀಂದ್ರ ಪಟ್ಟಾಲಮ್ಮ ದೇವಸ್ಥಾನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಸ್ಥಳೀಯ ‌ನಿವಾಸಿಗಳು ಉಪಸ್ಥಿತರಿದ್ದರು.