ಸಾರಾಂಶ
ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಏಕಕಕಾಲದಲ್ಲಿ ಜಿಲ್ಲೆಯ ನದಿ ಪಾತ್ರದ 15 ಕಡೆ ಮಹಾ ಆರತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಏಕಕಾಲದಲ್ಲಿ ಜಿಲ್ಲೆಯ ನದಿ ಪಾತ್ರದ 15 ಕಡೆ ಮಹಾ ಆರತಿ ಕಾರ್ಯಕ್ರಮ ನಡೆಯಿತು.ನಮಾಮಿ ಕಾವೇರಿ ಬಳಗದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಹಯೋಗದೊಂದಿಗೆ ಭಾಗಮಂಡಲ ಸಂಗಮ ದಿಂದ ಜಿಲ್ಲೆಯ ಗಡಿ ಭಾಗ ಶಿರಂಗಾಲ ತನಕ ನದಿ ತಟಗಳಲ್ಲಿ ಆರತಿ ಬೆಳಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಭಾಗಮಂಡಲ, ನಾಪೋಕ್ಲು, ಗುಹ್ಯ, ಕರಡಿಗೋಡು, ಬಲಮುರಿ, ಕುಶಾಲನಗರ, ಮಾದಾಪಟ್ಟಣ, ಕೂಡು ಮಂಗಳೂರು, ತೊರೆನೂರು, ಮುಳ್ಳುಸೋಗೆ, ಕೊಪ್ಪ ಸೇರಿದಂತೆ ವಿವಿಧ ಕಡೆಗಳಲ್ಲಿ ನದಿಗೆ ಆರತಿ ಬೆಳಗುವ ಮೂಲಕ ನದಿ ತಟದ ಜನರಿಗೆ ನದಿ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.
ತೊರೆನೂರು ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಎಲ್ಲ ಕಡೆಗಳಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಪ್ರಮುಖರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ 169ನೇ ಆರತಿ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಪಾಲ್ಗೊಂಡು ನದಿ ಸಂರಕ್ಷಣೆ, ಮತ್ತು ನದಿ ಜಾಗೃತಿ ಸ್ವಚ್ಛತೆ ಬಗ್ಗೆ ಮಾತನಾಡಿದರು.ಈ ಸಂದರ್ಭ ಯೋಜನೆಯ ಮೇಲ್ವಿಚಾರಕರಾದ ಪೂರ್ಣಿಮಾ ಮತ್ತು ಸೇವಾ ಪ್ರತಿನಿಧಿಗಳು ವಾಸವಿ ಯುವಜನ ಸಂಘದ ಪ್ರಮುಖರಾದ ವೈಶಾಖ್, ಪ್ರವೀಣ್ ಮತ್ತಿತರರು ಇದ್ದರು.