ಕುಶಾಲನಗರ: 179ನೇ ಮಹಾ ಆರತಿ ಕಾರ್ಯಕ್ರಮ ಸಂಪನ್ನ

| Published : Nov 08 2025, 03:00 AM IST

ಸಾರಾಂಶ

ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ 179ನೇ ಮಹಾಆರತಿ ಕಾರ್ಯಕ್ರಮ ಸಂಪನ್ನಗೊಂಡಿತು.

ಕುಶಾಲನಗರ: ಜೀವನದಿ ಕಾವೇರಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ನೇರವಾಗಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗದ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಹೇಳಿದರು.ಅವರು ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 179ನೇ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಲವು ಕಾರಣಗಳಿಂದ ನದಿ ಕಲುಷಿತ ಗೊಳ್ಳುವ ಮೂಲಕ ಅದನ್ನು ನೇರವಾಗಿ ಬಳಕೆ ಮಾಡುವ ಮಾನವನಿಗೆ ಹಾನಿ ಹಾಗೂ ಪ್ರಾಣಿ ಪಕ್ಷಿಗಳ ಸಂಕುಲದ ನಾಶಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದರು.ಈ ಸಂಬಂಧ ಕಳೆದ 16 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ನದಿ ಸಂರಕ್ಷಣೆಯ ಅರಿವು ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಅಭಿಯಾನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಆರತಿ ಕಾರ್ಯಕ್ರಮ ಅಂಗವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಷ್ಟೋತ್ತರ ಮತ್ತು ನದಿಗೆ ಮಹಾ ಆರತಿ ಕಾರ್ಯಕ್ರಮಗಳು ಜರುಗಿದವು.

ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರಾದ ಸಂಧ್ಯಾ ಗಣೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಶೃತಿ, ಯುವ ಘಟಕದ ಜಿಲ್ಲಾ ಪ್ರಮುಖರಾದ ಪರಮೇಶ್, ನಗರಾಧ್ಯಕ್ಷರಾದ ರೇಣುಕಾ, ಯುವ ಘಟಕದ ಉಪಾಧ್ಯಕ್ಷ ಪುನೀತ್, ತುಳಸಿ, ದೀಪು, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಅಣ್ಣಯ್ಯ, ಧರಣಿ, ಫಯಾಜ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್. ಮಾದಪ್ಪ, ಉಪಾಧ್ಯಕ್ಷರಾದ ಸುಬೇದಾರ್ ಎಳ್ತಂಡ ರಂಜಿತ್, ಕರುಂಬಯ್ಯ ಮತ್ತು ಬಳಗದ ಸದಸ್ಯರು ಇದ್ದರು.

ಇದೇ ಸಂದರ್ಭ ಭಾಗಮಂಡಲದಿಂದ ರಾಮನಾಥಪುರ ತನಕ ವಿವಿಧೆಡೆ ನದಿ ತಟಗಳಲ್ಲಿ ನಮಾಮಿ ಕಾವೇರಿ ಬಳಗದಿಂದ ಏಕಕಾಲದಲ್ಲಿ ಜೀವನದಿಗೆ ಮಹಾ ಆರತಿ ಕಾರ್ಯಕ್ರಮಗಳು ನಡೆದವು.ಹುಣ್ಣಿಮೆ ಅಂಗವಾಗಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಲಾಯಿತು. ಕನ್ನಡ ಸಂಘದ ಪ್ರಮುಖರಾದ ಬಬೀಂದ್ರಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.