ಕನ್ನಡಪ್ರಭವಾರ್ತೆ ಕುಶಾಲನಗರ

ಕುಶಾಲನಗರ ಪುರಸಭೆಯ 2026 -27 ನೇ ಸಾಲಿನ ಅಂದಾಜು ಬಜೆಟ್ ಮಂಡಿಸಲಾಗಿದ್ದು 15 ಲಕ್ಷದ 38 ಸಾವಿರ ರು. ಆದಾಯ ಘೋಷಣೆ ಮಾಡಲಾಗಿದೆ. ಕುಶಾಲನಗರದ ಪುರಸಭೆ ಸಭಾಂಗಣದಲ್ಲಿ ಮಡಿಕೇರಿ ಉಪವಿಭಾಗಾಧಿಕಾರಿ ಹಾಗೂ ಪುರಸಭೆಯ ಆಡಳಿತ ಅಧಿಕಾರಿ ಆಗಿರುವ ನಿತಿನ್ ಚೆಕ್ಕಿ ಅವರ ಸಮ್ಮುಖದಲ್ಲಿ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಬಜೆಟ್ ಮಂಡಿಸಿದರು. 2026 -27 ನೇ ಸಾಲಿಗೆ ಅಂದಾಜು ಆದಾಯ 31 ಕೋಟಿ 44 ಲಕ್ಷ 39 ಸಾವಿರ ನಿರೀಕ್ಷಿಸಲಾಗಿದ್ದು, 31ಕೋಟಿ 28 ಲಕ್ಷದ 91 ಸಾವಿರ ರು ನಿರೀಕ್ಷಿತ ಖರ್ಚು ತೋರಿಸಲಾಗಿದೆ. ಈ ಸಂದರ್ಭ ಮಾತನಾಡಿದ ಆಡಳಿತ ಅಧಿಕಾರಿ ನಿತಿನ್ ಚೆಕ್ಕಿ, ಪುರಸಭೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣ, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಸೋಲಾರ್ ಸಿಸಿಟಿವಿ ಅಳವಡಿಸಲು ಅನುದಾನ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಪಟ್ಟಣದ ಮುಖ್ಯರಸ್ತೆಯ ವೃತ್ತಗಳ ಅಭಿವೃದ್ಧಿ ಮತ್ತು ಕೆ ಎಂ ಕಾರ್ಯಪ್ಪ ಸರ್ಕಲ್ ಪ್ರತಿಮೆ ಹಾಗೂ ಗುಂಡೂರಾವ್ ಪ್ರತಿಮೆ ಸ್ಥಾಪನೆಗೆ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗಿದೆ ಎಂದು ಹೇಳಿದರು. ಪುರಸಭೆಯ ಪೌರ ಕಾರ್ಮಿಕರಿಗೆ ಅಪಘಾತ ವಿಮೆ ಮಾಡಿಸಲು ಬಜೆಟ್ನಲ್ಲಿ ಹಣ ಮೀಸಲಿರಿಸಲಾಗಿದೆ.ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ 10 ಲಕ್ಷ ರು. ಕಾಯ್ದಿರಿಸಲಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಆವರಣದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರ ಅಳವಡಿಸುವ ಬಗ್ಗೆ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರು ಈ ಬಾರಿಯ ಬಜೆಟ್ ನಲ್ಲಿ ಕಂದಾಯ ಕ್ರೋಡೀಕರಣಕ್ಕೆ ಆದ್ಯತೆ ಕಲ್ಪಿಸಲಾಗಿದೆ ಎಂದರಲ್ಲದೆ, ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಕಂದಾಯ ಅಧಿಕಾರಿ ರಾಮು, ಲೆಕ್ಕಾಧಿಕಾರಿ ಯಶವಂತ್ ಕಂದಾಯ ನಿರೀಕ್ಷಕರಾದ ಧನಂಜಯ ಮತ್ತು ಸಿಬ್ಬಂದಿ ಇದ್ದರು.