ಸಾರಾಂಶ
ಕುಶಾಲನಗರ ಸಮೀಪ ಗುಮ್ಮನಕೊಲ್ಲಿಯ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರಪೌಷ್ಟಿಕ ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೂಡಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ ಮೂರ್ತಿ ತಿಳಿಸಿದರು.ಕುಶಾಲನಗರ ಸಮೀಪ ಗುಮ್ಮನಕೊಲ್ಲಿಯ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತಿಯಿಂದ ಧ್ಯಾನ, ಶ್ಲೋಕ ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಬೆಳವಣಿಗೆ ಸಾಧ್ಯ ಎಂದರು.ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದು ಹೇಳಿದರು.ಗುಮ್ಮನಕೊಲ್ಲಿ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಮತಾ ಮಾತನಾಡಿ, ಗರ್ಭಿಣಿಯರು ಅಪೌಷ್ಠಿಕ ಆಹಾರ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಪೌಷ್ಠಿಕ ಆಹಾರ ಸೇವಿಸಬೇಕು ಎಂದ ಅವರು, ಗರ್ಭಿಣಿಯರ ಆರೈಕೆ, ಆರೋಗ್ಯ, ವಿಶ್ರಾಂತಿ, ವ್ಯಾಯಾಮ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ನಂತರ ಗರ್ಭಿಣಿಯರಿಗೆ ಅರಿಶಿಣ, ಕುಂಕುಮ ಹಚ್ಚಿ, ಬಳೆ, ಹಾಕಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಲಾಯಿತು.ಇದೇ ಸಂದರ್ಭ 6 ತಿಂಗಳ ಮಕ್ಕಳಿಗೆ ಅನ್ನಭ್ಯಾಸ ಹಾಗೂ 3 ವರ್ಷದ ಮಕ್ಕಳಿಗೆ ಅಕ್ಷರಭ್ಯಾಸ ನಡೆಸಲಾಯಿತು.ಈ ವೇಳೆ ಆಯುರ್ವೇದ ವೈದ್ಯಾಧಿಕಾರಿ ನಂದಿನಿ, ಅಂಗನವಾಡಿ ಕಾರ್ಯಕರ್ತೆಯರಾದ ಪುಟ್ಟಮ್ಮ, ನೀಲಮ್ಮ, ಚಂದ್ರಿಕಾ, ನಾಗರತ್ನ, ಕವಿತಾ, ನಾಗಮಣಿ, ಸರಸ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.