ಕುಷ್ಟಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೋರ್ಟ್‌ ತಡೆ

| Published : Aug 22 2024, 12:48 AM IST

ಸಾರಾಂಶ

ಕುಷ್ಟಗಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯು ಆ. 20ರಂದು ನಡೆಯಬೇಕಿತ್ತು. ಆದರೆ ಹೈ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆ ಮುಂದೂಡಲಾಗಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕುಷ್ಟಗಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯು ಆ. 20ರಂದು ನಡೆಯಬೇಕಿತ್ತು. ಆದರೆ ಹೈ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆ ಮುಂದೂಡಲಾಗಿದೆ.

ಕಾಂಗ್ರೆಸ್‌ ಪುರಸಭೆಯ ಸದಸ್ಯರಾದ ವಿಜಯಲಕ್ಷ್ಮಿ ಕಟ್ಟಿಮನಿ ಮತ್ತು ರಾಮಣ್ಣ ಬಿನ್ನಾಳ ಅಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿತ್ತು. ಈ ಹಿಂದೆ ಎರಡು ಬಾರಿಯು ಸಹಿತ ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರಿಸಲಾಗಿತ್ತು. ಈಗ ಮತ್ತೆ ಅದೇ ಮೀಸಲಾತಿಯು ಬಂದ ಹಿನ್ನೆಲೆ ಅದನ್ನು ತಡೆ ಹಿಡಿಯಬೇಕು ಎಂದು ಅರ್ಜಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಚುನಾವಣೆ ನಡೆಸದಂತೆ ಆದೇಶ ಹೊರಡಿಸಿದೆ.

ನಿರಾಸೆ:23 ಪುರಸಭೆಯ ಸದಸ್ಯರ ಪೈಕಿ ಬಿಜೆಪಿ ಪುರಸಭೆ ಸದಸ್ಯ ಮಹಾಂತೇಶ ಕಲಬಾವಿ ಒಬ್ಬರೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಬಹುತೇಕ ಅಧ್ಯಕ್ಷರಾಗುವುದು ಖಚಿತ ಎಂದು ಸಂತಸಪಟ್ಟಿದ್ದರು. ಆದರೆ, ಕೋರ್ಟ್‌ ತಡೆಯಾಜ್ಞೆ ಹಿನ್ನೆಲೆ ಅವರಿಗೆ ನಿರಾಸೆವುಂಟಾಗಿದೆ.

ಭಾಗ್ಯನಗರದ ಅಧ್ಯಕ್ಷ ಪಟ್ಟದ ಭಾಗ್ಯ ಯಾರಿಗೆ?:

ಕೊಪ್ಪಳ ಸಮೀಪದ ಭಾಗ್ಯನಗರದ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ತಡರಾತ್ರಿಯವರೆಗೂ ಕಾಂಗ್ರೆಸ್ ಹೈಕಮಾಂಡ್ ಗೌಪ್ಯವಾಗಿಯೇ ಇಟ್ಟಿದೆ.

ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ 19 ಸದಸ್ಯ ಬಲ ಇದ್ದು, ಇದರಲ್ಲಿ ಬಿಜೆಪಿ 9, ಕಾಂಗ್ರೆಸ್ 8 ಹಾಗೂ ಪಕ್ಷೇತರರು ಇಬ್ಬರು ಸದಸ್ಯರು ಇದ್ದಾರೆ. ಪಕ್ಷೇತರರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವುದರಿಂದ ಹಾಗೂ ಸಂಸದ, ಶಾಸಕರ ಮತ ಸೇರಿ ಕಾಂಗ್ರೆಸ್ ಬಲ 12ಕ್ಕೇರಿಕೆಯಾಗಲಿದ್ದು, ಸಹಜವಾಗಿಯೇ ಬಹುಮತ ಇದೆ.

ಹೀಗಾಗಿ, ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಷ್ಟಾಗಿ ಯಾವುದೇ ಚಟುವಟಿಕೆ ಪಕ್ಷದಲ್ಲಿ ಕಂಡು ಬರುತ್ತಿಲ್ಲ.

ಈಗಿರುವ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ತುಕರಾಮಪ್ಪ ಗಡಾದ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆಯಾದರೂ ಶ್ರೀನಿವಾಸ ಹ್ಯಾಟಿ ಮತ್ತು ಹೊನ್ನೂರುಸಾಬ ಪೈಪೋಟಿಯಲ್ಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಇಬ್ಬರು ಒಲ್ಲೆ ಎಂದಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚಿಂತೆಯಲ್ಲಿ ಕಾಂಗ್ರೆಸ್ ಇದೆ.

2 ವರ್ಷ 8 ತಿಂಗಳು:ಭಾಗ್ಯನಗರ ಪಟ್ಟಣ ಸದಸ್ಯರು ಆಯ್ಕೆಯಾಗಿ ಬರೋಬ್ಬರಿ 2 ವರ್ಷ 8 ತಿಂಗಳು ಆಗಿದೆ. ಈಗ ಇವರ ಅಧಿಕಾರವಧಿ ಪ್ರಾರಂಭವಾಗುತ್ತದೆ. ಮೀಸಲಾತಿ ವಿಷಯ ಕೋರ್ಟಿನಲ್ಲಿದ್ದಿದ್ದರಿಂದ ಆಯ್ಕೆಯಾದ ಮೇಲೆ ಇದುವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಹೀಗಾಗಿ, ಆಯ್ಕೆಯಾದ ಈ ಬಾರಿ ಸದಸ್ಯರು ಬರೋಬ್ಬರಿ 8 ವರ್ಷ ಅಧಿಕಾರದಲ್ಲಿದ್ದಂತೆ ಆಗುತ್ತದೆ. ಅಂತೂ ಈಗಲಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದೆಯಲ್ಲ, ಯಾರು ತಡೆಯಾಜ್ಞೆ ತರದಿರಲಿ ಎಂದು ಸದಸ್ಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.