ಕುಷ್ಟಗಿ ಸಂತೆ ಮಾರುಕಟ್ಟೆ ಸಮಸ್ಯೆಗಳ ಗೂಡು!

| Published : Jun 10 2024, 02:04 AM IST / Updated: Jun 10 2024, 10:46 AM IST

ಕುಷ್ಟಗಿ ಸಂತೆ ಮಾರುಕಟ್ಟೆ ಸಮಸ್ಯೆಗಳ ಗೂಡು!
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಂತೆ ಮಾರುಕಟ್ಟೆಯು ಸೂಕ್ತವಾದ ಸ್ಥಳ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

 ಪರಶಿವಮೂರ್ತಿ ದೋಟಿಹಾಳ

 ಕುಷ್ಟಗಿ :  ಪಟ್ಟಣದ ಸಂತೆ ಮಾರುಕಟ್ಟೆಯು ಸೂಕ್ತವಾದ ಸ್ಥಳ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

ಭಾನುವಾರ ಸುರಿದ ಮಳೆಯಿಂದಾಗಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಬಯಲಿನಲ್ಲೇ ಛತ್ರಿ ಹಿಡಿದುಕೊಂಡು, ತಾಡಪಲ್ ಕಟ್ಟಿಕೊಂಡು ಕಾಯಿಪಲ್ಯೆ ವ್ಯಾಪಾರ ಮಾಡಿದರೆ, ಗ್ರಾಹಕರು ಕೂಡ ಛತ್ರಿ ಹಿಡಿದುಕೊಂಡು ಮಾರುಕಟ್ಟೆ ಸುತ್ತಾಡಿ ಕಾಯಿಪಲ್ಯೆ ಖರೀದಿ ಮಾಡುತ್ತಿರುವುದು ಕಂಡು ಬಂತು.

ತಾಲೂಕು ಕೇಂದ್ರ ಸ್ಥಾನವಾದ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯಿಲ್ಲ. ರಸ್ತೆಗಳು ಬಿಡಾಡಿ ದನ ಹಾಗೂ ಬೀದಿ ನಾಯಿಗಳ ಅಡ್ಡೆಯಾಗಿ ಮಾರ್ಪಟ್ಟಿವೆ. ವ್ಯಾಪಾರಸ್ಥರು ಹಾಗೂ ನಿತ್ಯ ಬರುವ ಗ್ರಾಹಕರು ಮೂತ್ರ ಹಾಗೂ ಶೌಚಕ್ಕೆ ಬಹಳಷ್ಟು ತೊಂದರೆ ಪಡುವಂತಾಗಿದ್ದು, ಮಹಿಳೆಯರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಪುರಸಭೆಯವರು ಸಂತೆ ಮಾರುಕಟ್ಟೆಗೆ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕು ಎನ್ನುವುದು ಸ್ಥಳೀಯ ವ್ಯಾಪಾರಸ್ಥರ ಒತ್ತಾಯವಾಗಿದೆ.

ರಸ್ತೆಯಲ್ಲಿ ಸಂತೆ:

ಪ್ರತಿ ದಿನವೂ ಮಾರುಕಟ್ಟೆ ಹಾಗೂ ಭಾನುವಾರಕ್ಕೊಮ್ಮೆ ವಾರದ ಸಂತೆ ಭರ್ಜರಿಯಾಗಿ ನಡೆಯುತ್ತದೆ. ಆದರೆ, ಸ್ವಚ್ಛತೆ ಇಲ್ಲದ ಕಾರಣ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಮಾರುಕಟ್ಟೆ ಒಂದು ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತದೆ. ಬಸವೇಶ್ವರ ವೃತ್ತದಿಂದ ಸಂತೆ ಮಾರುಕಟ್ಟೆ ವರೆಗೂ ರಸ್ತೆಯಲ್ಲಿ ವ್ಯಾಪಾರಸ್ಥರು ತರಕಾರಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ, ಇದರಿಂದಾಗಿ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ಕೆಸರಿನ ಗದ್ದೆ:

ಮಳೆ ಆರಂಭವಾಗುತ್ತಿದ್ದಂತೆ ಇಡೀ ಮಾರುಕಟ್ಟೆ ಕೆಸರಿನ ಗದ್ದೆಯಂತಾಗುತ್ತದೆ. ಇದರಿಂದ ಗ್ರಾಹಕರು ಮಾರುಕಟ್ಟೆಗೆ ಬರಲು ಹಿಂದೆಮುಂದೆ ನೋಡುವಂತಾಗಿದೆ.

ಒಟ್ಟಿನಲ್ಲಿ ಈ ಸಂತೆ ಮಾರುಕಟ್ಟೆ ಸಮಸ್ಯೆಗಳ ಆಗರವಾಗಿದೆ. ಈ ಸಂತೆ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಹಾಗೂ ಸ್ಥಳಾವಕಾಶ ಕಲ್ಪಿಸಿಕೊಟ್ಟು ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಹಕರು ಹಾಗೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ನಾವು ಪ್ರತಿ ಭಾನುವಾರಕ್ಕೊಮ್ಮೆ ಕುಷ್ಟಗಿ ಮಾರುಕಟ್ಟೆಗೆ ಸಂತೆ ಮಾಡಲು ಬರುತ್ತಿದ್ದು, ಮಾರುಕಟ್ಟೆಯಲ್ಲಿ ನೀರು ಬೇಕಾದರೆ ಚಹಾದ ಅಂಗಡಿಗೆ ಹೋಗಿ ಕೇಳಬೇಕು. ಅಲ್ಲಿ ಹಾಗೆ ನೀರು ಕೊಡುವುದಿಲ್ಲ. ಏನಾದರೂ ವ್ಯಾಪಾರ ಮಾಡಿದರೆ ಮಾತ್ರ ನೀರು ಕೊಡ್ತಾರೆ. ಈ ಮಾರುಕಟ್ಟೆಯು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಪುರಸಭೆಯವರು ವ್ಯಾಪಾರಸ್ಥರಿಂದ ನೆಲದ ಬಾಡಿಗೆ ಪಡೆಯುತ್ತಾರೆ, ಆದರೆ ಬೇಕಾದ ಸೌಲಭ್ಯ ಕೊಟ್ಟಿಲ್ಲ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.