ಕುಷ್ಟಗಿಯ ನಿಡಶೇಸಿ ಕೆರೆಯ ಒಡಲು ಬರಿದು

| Published : Feb 27 2024, 01:32 AM IST

ಸಾರಾಂಶ

ಸುಮಾರು 280 ಎಕರೆಯಷ್ಟು ನೀರು ಇದೆ. 82.99 ಮಿಲಿಯನ್ ಕ್ಯುಸೆಕ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಹತ್ತಾರು ಹಳ್ಳಿಗಳ ಅನ್ನದಾತರ ಜೀವನಾಡಿಯಾದ ತಾಲೂಕಿನ ನಿಡಶೇಸಿ ಕೆರೆಯ ಒಡಲು ಬರಿದಾಗುತ್ತಿದ್ದು, ರೈತ ವಲಯದಲ್ಲಿ ಆತಂಕ ಎದುರಾಗಿದೆ.

ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆಯಾಗದ ಹಿನ್ನೆಲೆಯಲ್ಲಿ ಸದ್ಯ ನಿಡಶೇಸಿ ಕೆರೆ ಬರಿದಾಗುತ್ತಿದೆ. ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ-ಜಾನುವಾರು ಪಕ್ಷಿ ಸಂಕುಲಕ್ಕೆ ಸಂಕಟ ತಂದೊಡ್ಡಿದೆ.

ಇದು ತಾಲೂಕಿನಲ್ಲಿ ದೊಡ್ಡ ಕೆರೆಯೆಂದು ಹೆಸರುವಾಸಿಯಾಗಿದ್ದು, ಇದರ ಒಟ್ಟು ವಿಸ್ತೀರ್ಣ 327 ಎಕರೆ ಇದೆ. ಈ ಪೈಕಿ ಸುಮಾರು 280 ಎಕರೆಯಷ್ಟು ನೀರು ಇದೆ. 82.99 ಮಿಲಿಯನ್ ಕ್ಯುಸೆಕ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಸದ್ಯ ಶೇ. 8ರಷ್ಟು ಮಾತ್ರ ನೀರು ಉಳಿದಿದೆ. ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಬರಗಾಲ ಸೃಷ್ಟಿಯಾಗಿದೆ. ಬೇಸಿಗೆಯ ಆರಂಭದ ದಿನಗಳಲ್ಲಿ ಬಿಸಿಲು ಬಹಳಷ್ಟು ಇರುವ ಕಾರಣದಿಂದಾಗಿ ಕೆರೆಯಲ್ಲಿನ ನೀರು ದಿನಂಪ್ರತಿಯಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಕೆರೆಯ ಸುತ್ತಲಿನ ಜಮೀನುಗಳಲ್ಲಿರುವ ಬೋರ್‌ವೆಲ್‌ನಲ್ಲಿ ಅಂತರ್ಜಲ ಕುಸಿಯುವ ಆತಂಕ ಎದುರಾಗಿದೆ.

ಕೆರೆಗಳಿಗೆ ಕಂಟಕ:

ಹಲವು ಗ್ರಾಮಗಳ ಅನ್ನದಾತರ ಮುಖ್ಯ ಜಲ ಜೀವನಾಡಿಯಾದ ಕೆರೆಗಳು ಹಿಂದೆ ಬರಗಾಲ ಎದುರಾದಾಗ ದನ, ಕರುಗಳಿಗೆ ಕುಡಿಯುವ ನೀರು ಒದಗಿಸುವ ಜತೆ ಆಪತ್ಕಾಲದಲ್ಲಿ ಆಪತ್ಬಾಂಧವ ಎನಿಸಿಕೊಂಡಿದ್ದವು. ರೈತರ ಆತ್ಮಸ್ಥೈರ್ಯ ಹೆಚ್ಚಿಸಿದ ಕೆರೆಗಳು ಇದೀಗ ಅವನತಿಯ ಅಂಚಿನಲ್ಲಿವೆ. ಸರ್ಕಾರವು ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡಿ ಕೆರೆ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣಕ್ಕೆ ಮುಂದಾಗುತ್ತದೆ. ಇಂತಹ ದೊಡ್ಡ ಕೆರೆಗಳ ಅಭಿವೃದ್ಧಿ ಮೂಲಕ ಪುನರುಜ್ಜೀವನ ನೀಡಲು ಸರ್ಕಾರ ಮುಂದಾಗಬೇಕಿದೆ.

ಅಂತರ್ಜಲ ಕುಸಿತ:

ನಿಡಶೇಸಿ ಕೆರೆಯ ಸುತ್ತ ಸಾವಿರಾರು ಎಕರೆ ಭೂಮಿಯಲ್ಲಿ ನೂರಾರು ಬೋರ್‌ವೆಲ್ ಇದ್ದು, ನಿಡಶೇಸಿಯ ಕೆರೆ ತುಂಬಿದಾಗ ಅಂತರ್ಜಲ ಮಟ್ಟವು ಹೆಚ್ಚಾಗಿ ಬೋರ್‌ವೆಲ್‌ನಿಂದ ನೀರು ಸರಾಗವಾಗಿ ಬರುತ್ತಿತ್ತು. ಬಿಸಿಲಿನಿಂದ ಈ ಕೆರೆಯು ಬತ್ತುತ್ತಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್ಲಿನ ನೀರು ಕಡಿಮೆಯಾಗುತ್ತಿದ್ದು, ರೈತರಿಗೆ ಚಿಂತಾಜನಕ ಪರಿಸ್ಥಿತಿ ಎದುರಾಗಬಹುದು.

ಕೆರೆ ಸುತ್ತ ಗಿಡ, ಮರ ಸೇರಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಮಳೆ ಬಂದಾಗ ಅಥವಾ ಕೆರೆಗೆ ನೀರು ಬಿಟ್ಟಾಗ ಕೆರೆ ಭರ್ತಿಯಾಗಿ ದೇಶಿ-ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದವು. ನಾನಾ ಹಕ್ಕಿಗಳು ಗೂಡುಕಟ್ಟಿ ಸಂಸಾರ ನಡೆಸುತ್ತಿದ್ದವು. ಇದೊಂದು ಪಕ್ಷಿಧಾಮವಾಗಿಯೇ ಗುರುತಿಸಿಕೊಂಡಿತ್ತು. ವಿಶೇಷವಾಗಿ ಇಲ್ಲಿಗೆ ಸೈಬೇರಿಯ, ಮಂಗೋಲಿಯ, ಟಿಬೇಟ್‌ನಿಂದ ಈ ಕೆರೆಗೆ ಆಗಮಿಸುವುದನ್ನು ಕಾಣಬಹುದು.

ಕೆರೆಯಲ್ಲಿ ಪಟ್ಟೆತಲೆ ಹೆಬ್ಬಾತು, ಕಂದುಬಾತು, ಗೊರವ, ಹಿನ್ನೀರು, ಚಲುಕಬಾತು, ಕಡಲಹಕ್ಕಿ, ಕೆರೆತಲೆ, ಸೂಜಿಬಾಲದ ಬಾತು, ರೆಡ್ನಾಕ್ ಬರ್ಡ್, ಬಿಳಿಕೊಕ್ಕರೆ, ಕಂದು ಕೊಕ್ಕರೆ, ಕೃಷ್ಣವಾಹನ ಪಕ್ಷಿ, ಗೀಜುಗ, ಚಿಟಗುಬ್ಬಿ, ಗುಣಮಣಕ, ಬಾತುಕೋಳಿ, ನೀರು ಕೋಳಿ, ಭಾರತೀಯ ನೀರುಕಾಗೆ, ಸೇರಿ ನಾನಾ ಪ್ರಭೇದದ ಪಕ್ಷಿಗಳು ವಲಸೆ ಬರುತ್ತಿದ್ದವು. ಈ ಕೆರೆಯ ಆಶ್ರಯ ಪಡೆಯುತ್ತಿದ್ದವು. ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲವುಗಳನ್ನು ಮಾತ್ರ ಕಾಣಬಹುದು.

ಒಣಗಿದ ಗಿಡಮರ:

ಈ ಭಾಗದಲ್ಲಿ ಅರಣ್ಯ ಪ್ರದೇಶವಿದ್ದು, ಕೆರೆಗೆ ಹೊಂದಿಕೊಂಡು ನಾನಾ ಬಗೆಯ ಗಿಡಮರಗಳು ಬೆಳೆದಿವೆ. ಆದರೆ ಮಳೆ ಕೊರತೆಯಿಂದ ಅರಣ್ಯ ಪ್ರದೇಶದಲ್ಲಿನ ಸಸ್ಯ ಸಂಪತ್ತು ಒಣಗುತ್ತಿದೆ. ಅಧಿಕಾರಿಗಳು ನೈಸರ್ಗಿಕ ಸಂಪತ್ತು ರಕ್ಷಣೆ ಮಾಡಬೇಕಿದೆ.ನಿಡಶೇಸಿಯ ಕೆರೆ ಸಂಗ್ರಹ ಸಾಮರ್ಥ್ಯ 82.99 ಮಿಲಿಯನ್ ಕ್ಯಸೆಕ್ ಇದೆ. ಸದ್ಯ ಶೇ. 8ರಷ್ಟು ಮಾತ್ರ ನೀರು ಉಳಿದಿದೆ. ಈ ಕೆರೆಯಿಂದ ಸುಮಾರು ಏಳು ಹಳ್ಳಿಗಳಿಗೆ ಉಪಯೋಗವಾಗುತ್ತದೆ. ಇದಕ್ಕೆ ಒಡ್ಡು ಹಾಕುವುದು, ಸಿಡಿ ನಿರ್ಮಾಣ, ಕಾಮಗಾರಿಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎನ್ನುತ್ತಾರೆ ಎಂಜಿನಿಯರ್‌ ರಾಜು ಕಟ್ಟಿಮನಿ.