ಸಾರಾಂಶ
ಕುಸುಗಲ್ ಗ್ರಾಮ ಹುಬ್ಬಳ್ಳಿಗೆ ಸಮೀಪ ಇರುವುದರಿಂದ ಇದರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಹುಬ್ಬಳ್ಳಿ:
ತಾಲೂಕಿನ ಕುಸುಗಲ್ ಗ್ರಾಮವನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಮಾಡಿದೆ. ಇದು ಹರ್ಷ ತಂದಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ತಾಲೂಕಿನ ಕುಸುಗಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಸುಗಲ್ ಗ್ರಾಮ ಹುಬ್ಬಳ್ಳಿಗೆ ಸಮೀಪ ಇರುವುದರಿಂದ ಇದರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
₹10 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, ₹17 ಲಕ್ಷ ವೆಚ್ಚದಲ್ಲಿ ಮಹಿಳೆಯರಿಗೆ ಸಮುದಾಯ ಆಧಾರಿತ ಸಂಜೀವಿನಿ ಶೆಡ್ ನಿರ್ಮಾಣ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ನಿರ್ಮಿಸಿರುವ ವೀರಭದ್ರೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನದ ಸಮುದಾಯ ಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ರಂಗಮಂದಿರ ಹಾಗೂ ನೂತನ 2 ಶಾಲಾ ಕೊಠಡಿ ಉದ್ಘಾಟನೆ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕಿಲ್ಲೆ ರಸ್ತೆ ಸುಧಾರಣೆ ಹಾಗೂ ಸಿಡಿ ನಿರ್ಮಾಣ, ಕಿಲ್ಲೆಯ ಮುಸ್ಲಿಂ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.ಇದೇ ವೇಳೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕುಸುಗಲ್ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಬಿಇಒ ಉಮೇಶ ಭೂಮಕ್ಕನವರ, ಬಿಸಿಎಂ ಅಧಿಕಾರಿ ನಾಗರತ್ನಾ ಕ್ಯಾಸನೂರ, ಎಇಇ ಬಿ.ಎನ್. ಗೌಡರ, ಗ್ರಾಮದ ಹಿರಿಯರಾದ ಎಫ್.ಡಿ. ಪಾಟೀಲ, ಶಿವಣ್ಣ ಹೊಸಮನಿ, ವಿ.ಎಸ್. ಕೆಂಚನಗೌಡರ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಠಪತಿ, ಉಪಾಧ್ಯಕ್ಷೆ ಜೈತುನಬಿ ನದಾಫ, ಸದಸ್ಯರಾದ ರಾಜು ಸಂಕರಡ್ಡಿ, ಮಂಜುನಾಥ ಪಟ್ಟಣಶೆಟ್ಟಿ, ಸೋಮನಗೌಡ ಪಾಟೀಲ, ಸುರೇಶಗೌಡ ಪಾಟೀಲ ಉಪಸ್ಥಿತರಿದ್ದರು.