ಕುಸುಮಾ ಕಾಮತ್‌ಗೆ ‘ಕೊಂಕಣಿ ಮಾನ್ಯತಾ ದಿವಸ್ ಪುರಸ್ಕಾರ್’ ಪ್ರದಾನ

| Published : Aug 23 2024, 01:12 AM IST

ಸಾರಾಂಶ

ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ಇದರ ವತಿಯಿಂದ ಏರ್ಪಡಿಸಿದ ಸಮಾರಂಭವನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ಕೊಂಕಣಿ, ಕನ್ನಡ, ತುಳು ಭಾಷಾ ನಾಟಕ, ಚಲನಚಿತ್ರ ಕಲಾವಿದೆ, ಜಾನಪದ ಗಾಯಕಿ ಕುಸುಮಾ ಕಾಮತ್ ಕರ್ವಾಲು ಅವರಿಗೆ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ‘ಕೊಂಕಣಿ ಮಾನ್ಯತಾ ದಿವಸ್ - ೨೦೨೪’ ಸಮಾರಂಭದಲ್ಲಿ ‘ಮಾನ್ಯತಾ ದಿವಸ್ ಪುರಸ್ಕಾರ್’ ಪ್ರದಾನ ಮಾಡಲಾಯಿತು.ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ಇದರ ವತಿಯಿಂದ ಏರ್ಪಡಿಸಿದ ಸಮಾರಂಭವನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮುಖ್ಯ ಅತಿಥಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಮಂಗಳೂರು ವಿವಿ ಕೊಂಕಣಿ ಅಧ್ಯಯನ ಪೀಠದ ಸದಸ್ಯ ಬಿ.ಪುಂಡಲೀಕ ಮರಾಠೆ ಶಿರ್ವ ಮಾತನಾಡಿ, ೧೯೯೨ ಅಗಸ್ಟ್ ೨೦ರಂದು ನಮ್ಮ ಸಂವಿದಾನದ ೮ನೇ ಪರಿಚ್ಛೇಧದಲ್ಲಿ ಸೇರ್‍ಪಡೆಗೊಂಡು, ಅಧಿಕೃತವಾಗಿ ಕೊಂಕಣಿ ಭಾಷೆಗೆ ರಾಷ್ಟ್ರಭಾಷಾ ಮಾನ್ಯತೆ ನೀಡಿದ ದಿನವನ್ನು ಪ್ರತೀ ವರ್ಷ ‘ಕೊಂಕಣಿ ಮಾನ್ಯತಾ ದಿವಸ್’ ಎಂದು ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು ೪೨ ಸಮುದಾಯಗಳ ಮಾತೃಭಾಷೆ ಕೊಂಕಣಿಯಾಗಿದ್ದು ಗೋವಾದ ರಾಜ್ಯಭಾಷೆಯೂ ಆದ ಕೊಂಕಣಿ ಭಾಷಾ ಸಾಹಿತ್ಯಕ್ಕೆ ಎರಡು ಜ್ಞಾನಪೀಠ ಗೌರವ ಸಂದಿದೆ. ಸಮಸ್ತ ಕೊಂಕಣಿ ಭಾಷಿಕರು ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇಂದು ತೀರಾ ಅಗತ್ಯವಾಗಿದೆ, ಶಾಲೆಗಳಲ್ಲಿಯೂ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯುವ ಅವಕಾಶವನ್ನೂ ರಾಜ್ಯ ಸರಕಾರ ನೀಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಮುಂದಿನ ದಿನಗಳಲ್ಲಿ ಆರ್‌ಎಸ್‌ಬಿ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಸುವ ಇರಾದೆ ಹೊಂದಿದ್ದೇವೆ ಎಂದರು. ವೇದಿಕೆಯಲ್ಲಿ ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ಸರಸ್ವತೀ ಕಾಮತ್, ಶ್ರೀದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು ಪಾಲಮೆ ಉಪಸ್ಥಿತರಿದ್ದರು.ಶ್ರೀದುರ್ಗಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಸನ್ಮಾನಪತ್ರ ವಾಚಿಸಿದರು. ಜ್ಯೋತಿ ಶ್ರೀಪತಿ ನಾಯಕ್ ಪ್ರಾರ್ಥಿಸಿದರು. ನೀಲವೇಣಿ ಅರುಣ್ ಪ್ರಭು ನಿರೂಪಿಸಿದರು. ರಾಜಾಪುರ ಸಾರಸ್ವತ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.