ದೊಡ್ಡಬಳ್ಳಾಪುರ: ಮಕ್ಕಳು ಶಾಲಾ ಪಠ್ಯದ ಜೊತೆಗೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗೂ ಗಮನ ಕೊಡಬೇಕು ಎಂದು ಸೈಕ್ಲಿಂಗ್‌ಪಟು ಆರ್.ಪಿ.ರಘೋತ್ತಮ್‌ ಹೇಳಿದರು.

ದೊಡ್ಡಬಳ್ಳಾಪುರ: ಮಕ್ಕಳು ಶಾಲಾ ಪಠ್ಯದ ಜೊತೆಗೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗೂ ಗಮನ ಕೊಡಬೇಕು ಎಂದು ಸೈಕ್ಲಿಂಗ್‌ಪಟು ಆರ್.ಪಿ.ರಘೋತ್ತಮ್‌ ಹೇಳಿದರು.

ಇಲ್ಲಿನ ನಾಗರಕೆರೆ ಏರಿ ಆಚೆಗುಡಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ 55ನೇ ಗಾನೋದಯ ಗಾಯನ ಹಾಗೂ ‘ಓ ನನ್ನ ಚೇತನ - ವಿಶ್ವಮಾನವ ಗೀತೆ’ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಕುವೆಂಪುರವರಂತಹ ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿ ಅರ್ಥಮಾಡಿಕೊಳ್ಳುವುದರಿಂದ ವಿಶ್ವಮಾನವರಾಗುವ ದಾರಿ ಸುಗಮವಾಗುತ್ತದೆ ಎಂದರು.

ನಾಗದಳದ ಮುಖ್ಯ ಸಂಚಾಲಕ ಸಿ.ನಟರಾಜ್ ಮಾತನಾಡಿ, ಬುದ್ಧ, ಬಸವಣ್ಣ ಸೇರಿದಂತೆ ಹಲವಾರು ಮಹನೀಯರ ಮೂಲ ಆಶಯವೇ ವಿಶ್ವಮಾನವ ಸಂದೇಶವಾಗಿದ್ದು, ಕುವೆಂಪುರವರು ಅದಕ್ಕೆ ಸ್ಪಷ್ಟ ರೂಪ ನೀಡಿದರು. ವ್ಯಕ್ತಿ ಎಷ್ಟೇ ಸಾಧನೆ ಮಾಡಿದರೂ ಮಾನವತೆಯನ್ನು ಮರೆತರೆ ಅವೆಲ್ಲವೂ ವ್ಯರ್ಥ; ಏನಾದರೂ ಮೊದಲು ಮಾನವನಾಗಬೇಕು ಎಂಬ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವಮಾನವ ದಿನದ ಪ್ರಯುಕ್ತ ನಾಗದಳ ಹಾಗೂ ಗಾನೋದಯ ಗಾಯನವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ನಳಂದ ಪ್ರೌಢಶಾಲೆಯ ತ್ರಿಷಾ ಎಲ್.ಎಸ್(ಪ್ರಥಮ), ದೇವಲ ಮಹರ್ಷಿ ಪ್ರೌಢಶಾಲೆಯ ಯುಕ್ತ ಎಚ್.ಎಸ್(ದ್ವಿತೀಯ), ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಲ್ಪನ ಟಿ(ತೃತೀಯ) ಬಹುಮಾನ ಪಡೆದರು. ಕ್ರೀಡಾಪಟು ಆರ್.ಪಿ. ರಘೋತ್ತಮ್ ಬಹುಮಾನ ವಿತರಣೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ 60 ಸಾವಿರ ಕಿಲೋಮೀಟರ್ ಸೈಕಲ್ ಪಯಣ ಪೂರೈಸಿರುವ ನಾಗದಳದ ಸದಸ್ಯ ಆರ್.ಪಿ. ರಘೋತ್ತಮ್ ಅವರನ್ನು ಸನ್ಮಾನಿಸಲಾಯಿತು.

ಗಾಯಕ–ಗಾಯಕಿಯರು ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಹಾಡಿದರು. ನಾಗದಳದ ಸಂಚಾಲಕರಾದ ಎ. ವೆಂಕಟೇಶ್, ನುನ್ನ ನಾಗರಾಜ್, ಎ.ವಿ. ರಘು, ಗಾಯಕರಾದ ಕೆ. ನಂಜುಂಡಮೂರ್ತಿ, ಕೆ.ಪಿ. ಪ್ರಕಾಶ್, ರಾಮಣ್ಣ, ಜನಾರ್ದನ್.ಎ.ಎಲ್. ಮಾನಸಿ ಉಪಸ್ಥಿತರಿದ್ದರು.

-

12ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ 55ನೇ ಗಾನೋದಯ ಕಾರ್ಯಕ್ರಮದಲ್ಲಿ ‘ಓ ನನ್ನ ಚೇತನ’ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.