ಕುವೆಂಪು ಅನೇಕ ಚೇತನಗಳ ಸಮ್ಮಿಲನವಾಗಿದ್ದರು

| Published : Jan 06 2025, 01:03 AM IST

ಸಾರಾಂಶ

ಕುವೆಂಪು ಜನಿಸಿದ ಹಿಂದಿನ ಶತಮಾನ, ಪ್ರಪಂಚದ ಇತಿಹಾಸಲ್ಲಿ ಮಹಾನ್ ಪುರುಷರು, ಕವಿಗಳು, ವಿಜ್ಞಾನಿಗಳು, ಋಷಿಗಳನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಮಹಂಸರಂತಹ ಮಹಾನ್ ಸಮನ್ವಯವಾದಿ, ವಿವೇಕಾನಂದರಂತಹ ಸಿಂಹ ಘರ್ಜನೆಯ ವಾಗ್ಮಿ, ದಯಾನಂದ ಸರಸ್ವತಿ ಸೇರಿದಂತೆ ಅನೇಕ ಚೇತನಗಳನ್ನು ಕುವೆಂಪು ಅವರಲ್ಲಿ ಕಾಣಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಎನ್. ಬೋರಲಿಂಗಯ್ಯ ಹೇಳಿದರು.

ಕುವೆಂಪುನಗರದ ಚಿಕ್ಕಮ್ಮ ನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂದನ ಟ್ರಸ್ಟ್ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಜನಿಸಿದ ಹಿಂದಿನ ಶತಮಾನ, ಪ್ರಪಂಚದ ಇತಿಹಾಸಲ್ಲಿ ಮಹಾನ್ ಪುರುಷರು, ಕವಿಗಳು, ವಿಜ್ಞಾನಿಗಳು, ಋಷಿಗಳನ್ನು ನೀಡಿದೆ. ಆ ಎಲ್ಲಾ ಮಹಾನ್ ಸಾಧಕರ ಹೆಗಲ ಮೇಲೆ ಕುಳಿತ ಮಹಾನ್ ಚೇತನ ಕುವೆಂಪು. ಅಲ್ಲಿ ವಿಜ್ಞಾನಿಗಳು, ಸಮಾಜ ಸುಧಾರಕರು, ಸಾಹಿತಿಗಳು ಇದ್ದಾರೆ ಎಂದು ಹೇಳಿದರು.

ಜಗತ್ತಿನ ಎಲ್ಲಾ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿದ್ದವರು ಕುವೆಂಪು. ಅವರಿಗೆ ಗೊತ್ತಿಲ್ಲದ ವಿಷಯ ಇರಲಿಲ್ಲ. ಗೊತ್ತಿರುವವರ ಬಳಿ ಮಾತನಾಡಿ, ವಿಜ್ಞಾನವನ್ನು ಸಂಗ್ರಹಿಸಿಕೊಂಡಿದ್ದರು. ಎಲ್ಲಾ ವಿಚಾರಗಳನ್ನು ಗಟ್ಟಿಯಾಗಿ ಬಟ್ಟಿ ಇಳಿಸಿದ ಮೇರು ಕೃತಿ ಶ್ರೀರಾಮಾಯಣ ದರ್ಶನ ಎಂದರು.

ನನಗೆ ತಿಳಿದ ಮಟ್ಟಿಗೆ ಕುವೆಂಪು ಅವರು ಮಹಾನ್ ಕವಿಯಾಗಿ, ಋಷಿಯಾಗಿ, ಮದುವೆಯಾಗಿಯೂ ಸನ್ಯಾಸಿಯಾಗಿದ್ದರು. ಅಷ್ಟೇ ಅಲ್ಲದೆ, ಕರ್ನಾಟಕದ ಪಂಪ, ಕುಮಾರವ್ಯಾಸ, ರನ್ನ, ಹರಿಹರ, ಬಸವಣ್ಣ, ರತ್ನಾಕರವರ್ಣಿ ಸೇರಿದಂತೆ ಪಂಪನಿಂದ ಬೇಂದ್ರೆವರೆಗಿನ ಎಲ್ಲರ ಪ್ರಭಾವಕ್ಕೂ ಒಳಗಾಗುವ ಜತೆಗೆ ಎಲ್ಲರನ್ನು ಜೀರ್ಣಿಸಿಕೊಂಡಿದ್ದಾಗಿ ಅವರು ಹೇಳಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕುವೆಂಪು ಯುಗದ ಕವಿಯಾಗಿ ಹೊಸ ಬೆಳಕನ್ನು ಸಮಾಜಕ್ಕೆ ನೀಡಿದರು. ಬುದ್ಧನ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ವೈಚಾರಿಕ ಸಂದೇಶ ಸಾರಿದ್ದಾಗಿ ಹೇಳಿದರು.

ಕುವೆಂಪು ಅವರು ಜಾತಿ ವ್ಯವಸ್ಥೆಯಿಂದ ಹೊರ ಬನ್ನಿ. ಆದರೆ, ದೇಶದಲ್ಲಿಂದು ಜಾತಿ ವ್ಯವಸ್ಥೆ ಕೆಟ್ಟ ಸ್ವರೂಪ ತಾಳಿದೆ. ನಾವು ವೇದಿಕೆಯಲ್ಲಿ ಕುವೆಂಪು ಅವರ ಬಗ್ಗೆ ಮಾತನಾಡುತ್ತೇವೆ. ಜಾತಿ ಪದ್ಧತಿಯನ್ನು ವಿರೋಧಿಸುತ್ತೇವೆ. ಆದರೆ, ವೇದಿಕೆಯಿಂದ ಇಳಿದ ಮೇಲೆ ಮತ್ತೆ ಜಾತಿ ಕೂಪಕ್ಕೆ ಸಿಲುಕುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಇಂದು ಎಲ್ಲಾ ಕಡೆ ಅಂತರ್ಜಾತಿ ವಿವಾಹ ಆಗುತ್ತಿದೆ. ಆದರೆ, ಅವರ ಮಕ್ಕಳು ಅಪ್ಪ ಅಥವಾ ಅಮ್ಮನ ಯಾವುದಾರೂ ಜಾತಿಗೆ ಅಂಟಿಕೊಳ್ಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಜಾತ್ಯಾತೀತ ಸಮಾಜ ಸೃಷ್ಟಿಗೆ ಅಂತರ್ಜಾತಿ ವಿವಾಹ ಮುಖ್ಯ. ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಅಭಿನಂದಿಸುತ್ತಿರುವ ಇಂತಹ ಕಾರ್ಯಕ್ರಮವನ್ನು ಶ್ಲಾಘಿಸಬೇಕು ಎಂದರು.

ಇದೇ ವೇಳೆ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಅಡಿಯಲ್ಲಿ ಅಂತರ್ಜಾತಿ ವಿವಾಹವಾಗಿ ಆದರ್ಶದ ಬದುಕನ್ನು ಮುನ್ನಡೆಸುತ್ತಿರುವ ದಂಪತಿಗಳನ್ನು ಅಭಿನಂದಿಸಲಾಯಿತು.

ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ. ಕಾಳೇಗೌಡ ನಾಗವಾರ, ರಂಗಕರ್ಮಿ ಜನಾರ್ಧನ್, ಎಚ್.ಎ. ವೆಂಕಟೇಶ್, ಡಾ.ಆರ್. ಸ್ವಾಮಿ ಆನಂದ್, ಈ. ಧನಂಜಯ ಎಲಿಯೂರು ಇದ್ದರು.