ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕ್ವಿನ್‌ ಸಿಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

 ಬೆಂಗಳೂರು : ಕ್ವಿನ್ ಸಿಟಿ - ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನಾ ನಗರವು ಕರ್ನಾಟಕ ಹಾಗೂ ರಾಷ್ಟ್ರಕ್ಕೆ ಗೇಮ್ ಚೇಂಜರ್ ಆಗಲಿದೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ರಹದಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕ್ವಿನ್‌ ಸಿಟಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮಹತ್ವಾಕಾಂಕ್ಷೆಯ ವಿಶಿಷ್ಟ ಯೋಜನೆಯೊಂದಿಗೆ ರಾಜ್ಯದ ನಾವಿನ್ಯತೆಯ ಪರಂಪರೆ ಮುಂದುವರೆಯುತ್ತಿದೆ. ಜಾಗತಿಕ ಮಟ್ಟದ ಮೂಲಸೌಕರ್ಯಗಳು ಮತ್ತು ಉದ್ಯಮಗಳಿಗೆ ಪೂರಕವಾದ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತದೆ. ಆರ್ಥಿಕ ಬೆಳವಣಿಗೆಯ ಜೊತೆಗೆ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿಯ ಕಡೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 45 ಯೂನಿಕಾರ್ನ್ಸ್‌ಗಳಿದ್ದು, ದೇಶದ ಶೇ.50ರಷ್ಟು ನಮ್ಮಲ್ಲೇ ಇವೆ. 17 ಸಾವಿರಕ್ಕೂ ಹೆಚ್ಚು ಏಂಜಲ್ ಹೂಡಿಕೆದಾರರು, 1,500 ವೆಂಚರ್ ಕ್ಯಾಪಿಟಲ್ ಹೂಡಿಕೆಗಳು ಬಂದಿವೆ. ನಾವಿನ್ಯತೆಯನ್ನು ಪ್ರೋತ್ಸಾಹಿಸುವ ಹಾಗೂ ಪ್ರತಿಭೆಯನ್ನು ಪೋಷಿಸುವ ಮೂಲಕ ವಾಣಿಜ್ಯೋದ್ಯಮಕ್ಕೆ ಸಹಕರಿಸುವ ಬದ್ಧತೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಭವಿಷ್ಯವನ್ನು ಗುರಿಯಾಗಿಸಿಕೊಂಡು ಜನರ ಜೀವನದಲ್ಲಿ ಬದಲಾವಣೆ ತರಲು ಕ್ವಿನ್ ಸಿಟಿ ಸ್ಥಾಪಿಸಲಾಗುತ್ತಿದೆ. ನಗರದ ಅಭಿವೃದ್ಧಿಗೆ ನಾನು ಕಟಿಬದ್ಧನಾಗಿದ್ದೇನೆ. ಅಗತ್ಯವಿರುಷ್ಟು ನೀರು, ನಿರಂತರ ವಿದ್ಯುತ್ ಸಂಪರ್ಕ, ಗುಣಮಟ್ಟದ ರಸ್ತೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಜನರಿಗೆ ಹಾಗೂ ಕೈಗಾರಿಕೆಗಳಿಗೆ ಒದಗಿಸುವುದು ನಮ್ಮ ಆದ್ಯತೆ ಎಂದು ಹೇಳಿದರು.

ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಉತ್ತಮ ತಂತ್ರಜ್ಞರಿದ್ದಾರೆ. ಸ್ಟಾರ್ಟ್‌ ಅಪ್‌ಗಳಿವೆ. ಎಲ್ಲವನ್ನು ಬಳಸಿಕೊಂಡು ಭವಿಷ್ಯವನ್ನು ಗಟ್ಟಿಗೊಳಿಸಬೇಕು. ಭಾರತವನ್ನು ಗಟ್ಟಿಗೊಳಿಸಲು ಕರ್ನಾಟಕದಲ್ಲಿ ಅಡಿಪಾಯ ನಿರ್ಮಾಣ ಮಾಡಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಮೋದಿ ನಮಗೆ ಗಿಫ್ಟ್‌ ಸಿಟಿ ನೀಡಲಿಲ್ಲ: ಡಿಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೆಹಲಿ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಬಳಿ ಗುಜರಾತ್‌ನ ಗಿಫ್ಟ್ ಸಿಟಿ ಯೋಜನೆಯಂತೆ ನಮ್ಮ ರಾಜ್ಯಕ್ಕೂ ಗಿಫ್ಟ್ ಸಿಟಿ ಯೋಜನೆ ನೀಡಬೇಕೆಂದು ಮನವಿ ಮಾಡಿದೆವು. ಆದರೆ, ಈ ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಇರಬೇಕು ಎಂದು ನಮ್ಮ ಮನವಿಯನ್ನು ತಿರಸ್ಕರಿಸಿದ್ದರು. ನಾವು ಕ್ವಿನ್‌ ಸಿಟಿಯನ್ನು ಗಿಫ್ಟ್ ಸಿಟಿ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಸಾಧಿಸಿ ತೋರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

1 ಲಕ್ಷ ಉದ್ಯೋಗ ಸೃಷ್ಟಿ: ಎಂಬಿಪಾ

ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. 5 ಲಕ್ಷ ಜನವಸತಿ ಸಾಮರ್ಥ್ಯದ ಈ ನಗರದಲ್ಲಿ ಶೇ.40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. ಜಲಪೂರಣ ವ್ಯವಸ್ಥೆ, 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆ, ಹಣ್ಣು-ತರಕಾರಿ ಕೃಷಿ ಕೂಡ ಮಾಡಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

ಗುಣಮಟ್ಟದ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುವುದು. ಜಗತ್ತಿನ ಅಗ್ರ 500 ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40,000 ಕೋಟಿ ರು. ಹೂಡಿಕೆಯಾಗಲಿದೆ ಎಂದು ವಿವರಿಸಿದರು. 

ಕ್ವಿನ್ ಸಿಟಿ ಬಗೆಗಿನ ಮಾಹಿತಿಗೆ kwincity.com ನೋಡಬಹುದು.