ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರ ಮಿತಿ ಹೆಚ್ಚಳದಿಂದ ಹಾಗೂ ಗುತ್ತಿಗೆ ಕಾರ್ಮಿಕರ ಲೈಸೆನ್ಸ್‌ಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದ ಶೇ.90 ರಷ್ಟು ಕಾರ್ಮಿಕರು ಇ.ಎಸ್.ಐ, ಪಿ.ಎಫ್, ಗ್ರಾಚ್ಯುಟಿ ಮತ್ತು ಬೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೆ.ಆರ್.ಪೇಟೆ ಪಟ್ಟಣದಲ್ಲೂ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಲೂಕಿನ ಗ್ರಾಮ ಪಂಚಾಯ್ತಿ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಕರ್ನಾಟಕ ರಾಜ್ಯ ರೈತಸಂಘ, ಹೇಮಗಿರಿ ಸಕ್ಕರೆ ಕಾರ್ಖಾನೆ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಕಾರ್ಮಿಕರ ಹೋರಾಟ ಬೆಂಬಲಿಸಿ ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ಹೋರಾಟಗಾರರು ಅನಂತರ ಮೆರವಣಿಗೆಯ ಮೂಲಕ ಪ್ರವಾಸಿ ಮಂದಿರ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಕೆಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ ಎಂದರು.

ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರ ಮಿತಿ ಹೆಚ್ಚಳದಿಂದ ಹಾಗೂ ಗುತ್ತಿಗೆ ಕಾರ್ಮಿಕರ ಲೈಸೆನ್ಸ್‌ಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದ ಶೇ.90 ರಷ್ಟು ಕಾರ್ಮಿಕರು ಇ.ಎಸ್.ಐ, ಪಿ.ಎಫ್, ಗ್ರಾಚ್ಯುಟಿ ಮತ್ತು ಬೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲೂಕು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮೋದೂರು ನಾಗರಾಜು, ಕಾರ್ಯದರ್ಶಿ ಕೆ.ಎನ್.ಆನಂದರಾವ್, ಉಪಾಧ್ಯಕ್ಷ ಸೋಮೇಗೌಡ, ಕೋಸಾಧ್ಯಕ್ಷ ಎ.ಕೆ.ಮಂಜೇಗೌಡ, ಜಿಲ್ಲಾ ರೈತ ಸಂಘದ ಉಪಧ್ಯಕ್ಷ ಮರುವನಹಳ್ಳಿ ಸಂಕರ್, ರೈತ ಮುಖಂಡರಾದ ಹೊನ್ನೇಗೌಡ, ಕರೋಟಿ ತಮ್ಮಯ್ಯ, ಅಂಗನವಾಡಿ ಕಾರ್ಯಕರ್ತೆಯರ ಸಂಗದ ಅಧ್ಯಕ್ಷೆ ಧನಲಕ್ಷ್ಮಿ, ಕಾರ್ಯದರ್ಶಿ ಕೃಷ್ಣಮ್ಮ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಭಾಗ್ಯಮ್ಮ, ಹೇಮಗಿರಿ ಸಕ್ಕರೆ ಕಾರ್ಖಾನೆಯ ನೌಕರರ ಸಂಗದ ಜವರೇಗೌಡ, ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.