ಗಂಗಾವತಿ: ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆ ಮತ್ತು ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ ವಿರೋಧಿಸಿ ಕಾರ್ಮಿಕ ಮತ್ತು ರೈತ ಸಂಘಟನೆ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಬೆಂಬಲ ವ್ಯಕ್ತ ಪಡಿಸಿದರು.

ಗಂಗಾವತಿಯಲ್ಲಿ ಎಐಟಿಯುಸಿ ನೇತೃತ್ವದಲ್ಲಿ ನಡೆದ ಮುಷ್ಕರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಮಹಿಳಾ ಕಾರ್ಮಿಕರು, ಹಮಾಲರು ಭಾಗವಹಿಸಿ ಅಕ್ರೋಶ ವ್ಯಕ್ತ ಪಡಿಸಿದರು.

ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೆ ಕಾರ್ಮಿಕ ಹೊಸ ನೀತಿ ಕೈಬಿಡಬೇಕೆಂದು ಆಗ್ರಹಿಸಿದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಎ.ಎಲ್. ತಿಮ್ಮಣ್ಣ, ಅಂಜನೆಯ ನಾಯಕ, ಶಂಕರಪ್ಪಕುರಹಟ್ಟಿ, ಹಂಪಸದುರ್ಗಾ, ಲಕ್ಕಮ್ಮ,ಗಂಗಮ್ಮ, ಲಕ್ಷ್ಮೀ, ಹುಲಿಹೈದರ್,ಮಂಜುನಾಥ, ಶ್ರೀ ನಿವಾಸ ಹೆಬ್ಬಾಳ, ಶೇಖಮ್ಮಹೂಸಳ್ಳಿ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.

ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ: ನಗರದ ಶ್ರೀಚೆನ್ನಬಸವಸ್ವಾಮಿ ವೃತ್ತದಲ್ಲಿ ಸಿಪಿಎಂ, ಸಿಐಟಿಯು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕೃಷಿ ಕೂಲಿಕಾರರ ಸಂಘ, ಹಾಸ್ಟೇಲ್ ಹೊರಗುತ್ತಿಗೆ ನೌಕರರ ಸಂಘ ಮತ್ತು ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಒಂದುವರೇ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ನಿರುಪಾದಿ ಬೆಣಕಲ್, ಬ್ಯಾಂಕ್ ಅಧಿಕಾರಿ ಬಸನಗೌಡ, ಸ್ವಾಮೀರಾವ್ ಹೇರೂರು, ಮಹ್ಮದ್, ವಾಸುದೇವರಾವ, ವೆಂಕಟೇಶ, ಪ್ರಭಾಕರ, ಹುಸೇನಪ್ಪ, ಮಂಜುನಾಥ, ಗ್ಯಾನೇಶ ಕಡಗದ, ಹುಲಿಗೆಮ್ಮ, ದುರಗಮ್ಮ, ಸಾವಿತ್ರಿ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.