ಸಾರಾಂಶ
ಟ್ರ್ಯಾಕ್ಟರ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಟನ್ ಸೌಧೆ ತುಂಬಿದ್ದು, ಹೆಚ್ಚು ಭಾರವಾದ ಹಿನ್ನೆಲೆಯಲ್ಲಿ ಚಕ್ರ ಸ್ಪೋಟಗೊಂಡಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ನೀಲಗಿರಿ ಸೌಧೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನ ಚಕ್ರ ಸ್ಪೋಟಗೊಂಡು, ಚಕ್ರದಲ್ಲಿದ್ದ ಕಬ್ಬಿಣದ ರಿಮ್ ಸುಮಾರು ಹತ್ತು ಅಡಿ ಎಗರಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನಿಗೆ ಹೊಡೆದ್ದರಿಂದ ಸ್ಥಳದಲ್ಲೇ ಕಾರ್ಮಿಕ ಮೃತಪಟ್ಟಿರುವ ಘಟನೆ ದಾಬಸ್‌ಪೇಟೆ ಪಟ್ಟಣದಲ್ಲಿ ನಡೆದಿದೆ.ತುಮಕೂರು ಪಟ್ಟಣದ ಸಾಬುದ್ದೀನ್ (53) ಮೃತಪಟ್ಟ ಕಾರ್ಮಿಕನಾಗಿದ್ದು, ಈತ ಕಾರ್ಖಾನೆಗಳಲ್ಲಿರುವ ಕಬ್ಬಿಣದ ಯಂತ್ರಗಳಿಗೆ ಲೇತ್ ಮಾಡುವ ಕೆಲಸ ಮಾಡುತ್ತಿದ್ದರು.
ಘಟನಾ ವಿವರ: ಮೇ.20ರಂದು ಬೆಳಿಗ್ಗೆ ತುಮಕೂರಿನಿಂದ ಮೃತ ಕಾರ್ಮಿಕ ಸಾಬುದ್ದೀನ್ ಕೆಲಸದ ನಿಮಿತ್ತ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗೆ ಬಂದು ಲೇತ್ ಕೆಲಸ ಮುಗಿಸಿ ಸಂಜೆ ಸುಮಾರು 5.30 ಗಂಟೆಯ ಸಮಯಲ್ಲಿ ತುಮಕೂರಿಗೆ ಹೋಗಲು ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಪಾದಾಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ಸಮಯದಲ್ಲಿ ನಿಡವಂದದ ಕಡೆಯಿಂದ ದಾಬಸ್‌ಪೇಟೆ ಕಡೆಗೆ ಟ್ರ್ಯಾಕ್ಟರ್ ನೀಲಗಿರಿ ಸೌಧೆಗಳನ್ನು ತುಂಬಿಕೊಂಡು ಬರುತ್ತಿದ್ದಾಗ ಟೈಲರ್ ನಾ ಹಿಂಬದಿ ಚಕ್ರ ಸ್ಪೋಟಗೊಂಡಿದ್ದು, ಅದರಲ್ಲಿದ್ದ ಕಬ್ಬಿಣದ ರಿಮ್ ಸುಮಾರು ಹತ್ತು ಅಡಿ ಎಗರಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನಿಗೆ ತಗುಲಿದ ಪರಿಣಾಮ ತಲೆಗೆ, ಕಿವಿಗೆ ತೀವ್ರವಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನೂ ಟ್ರ್ಯಾಕ್ಟರ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಟನ್ ಸೌಧೆ ತುಂಬಿದ್ದು, ಹೆಚ್ಚು ಭಾರವಾದ ಹಿನ್ನೆಲೆಯಲ್ಲಿ ಚಕ್ರ ಸ್ಪೋಟಗೊಂಡಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಘಟನಾ ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಂಜನ್ ಕುಮಾರ್, ಎಎಸ್‌ಐ ಮಲ್ಲೇಶ್, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರ್ಯಾಕ್ಟರ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.