ಕಾರ್ಮಿಕರಿಗೆ ಸಿಗುತ್ತಿಲ್ಲ ಕನಿಷ್ಠ ವೇತನ: ಪಂಪಾಪತಿ

| Published : Apr 11 2025, 12:31 AM IST / Updated: Apr 11 2025, 12:32 AM IST

ಸಾರಾಂಶ

ಕಾರ್ಮಿಕ ಇಲಾಖೆ ನಿಯಮಗಳಿದ್ದರೂ ಸರ್ಕಾರ ನಿಯಮ ಮೀರಿ ಕಾರ್ಮಿಕರನ್ನು ವಲಯ ೩ರಿಂದ ೪ಕ್ಕೆ ವಿಂಗಡಣೆ ಮಾಡುವಾಗ ಕಾರ್ಮಿಕರಿಗೆ ಭಾರಿ ಅನ್ಯಾಯ ಮಾಡುತ್ತಿದೆ.

ಕೊಪ್ಪಳ:

ರಾಜ್ಯ ಸರ್ಕಾರದಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ನೀಡಬೇಕು ಎಂದು ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಆರ್. ಪಂಪಾಪತಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾರ್ಮಿಕ ಇಲಾಖೆ ನಿಯಮಗಳಿದ್ದರೂ ಸರ್ಕಾರ ನಿಯಮ ಮೀರಿ ಕಾರ್ಮಿಕರನ್ನು ವಲಯ ೩ರಿಂದ ೪ಕ್ಕೆ ವಿಂಗಡಣೆ ಮಾಡುವಾಗ ಕಾರ್ಮಿಕರಿಗೆ ಭಾರಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

೨೦೨೨ರಲ್ಲಿ ವಲಯದಲ್ಲಿ ಬದಲಾವಣೆ ಮಾಡಿದ್ದರಿಂದ ಹೊರಗುತ್ತಿಗೆ ಕಾರ್ಮಿಕರಿಗೆ ಮೂಲ ವೇತನಕ್ಕಿಂತ ಕಡಿಮೆ ಮಾಡಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆಯ ನಿಯಮದ ಉಲ್ಲಂಘನೆಯಾಗಿದೆ. ಇದರಿಂದ ಹಲವು ಕಾರ್ಮಿಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆಯಾದರೂ ಸ್ಪಂದಿಸುತ್ತಿಲ್ಲ ಎಂದರು. ಜಿಲ್ಲೆಯಲ್ಲಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲು ಜಿಲ್ಲಾಧಿಕಾರಿಗೆ ಕಾರ್ಮಿಕ ಸಚಿವರು ಪತ್ರ ಬರೆದಿದ್ದಾರೆ. ಈ ಹಿಂದೆಯೂ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಈ ಕುರಿತು ಮೂರು ಬಾರಿ ಡಿಸಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಅಕ್ಕಪಕ್ಕದ ಜಿಲ್ಲೆಗಳಲ್ಲಿನ ನಡೆಯುವ ದಾಖಲೆ ತಿಳಿಸಿದ್ದೇವೆ. ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೂ ಮಾಡುತ್ತಿಲ್ಲ. ಕೆಲವು ಮೂಲಗಳ ಪ್ರಕಾರ ಈ ವಿಷಯದಲ್ಲಿ ರಾಜಕೀಯದ ಒತ್ತಡ ಇದೆ ಎನ್ನುವುದು ಗೊತ್ತಾಗಿದೆ. ಡಿಸಿ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಕಾರ್ಮಿಕ ಮುಖಂಡರಾದ ಗುರುರಾಜ ಕುದರಿಮೋತಿ, ರಾಬರ್ಟ್, ಶರಣಪ್ಪ ಸಿಂದೋಗಿ, ದಿವಾಕರ್ ಬಿ. ಉಪಸ್ಥಿತರಿದ್ದರು.