ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಿಂಗಳು ಕಳೆದರೂ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಲಿಂಗಪಟ್ಟಣ ಗ್ರಾಮ ಪಂಚಾಯ್ತಿ ಎದುರು ನೂರಾರು ಕೂಲಿಕಾರರು ಸೋಮವಾರ ಪ್ರತಿಭಟನೆ ನಡೆಸಿದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ ಮಾತನಾಡಿ, ಗ್ರಾಪಂನಲ್ಲಿ ಕೂಲಿಕಾರರು ಪ್ರತಿ ಬಾರಿಯೂ ಹೋರಾಟ ಮಾಡಿಯೇ ಕೆಲಸ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ದೇಶಪೂರ್ವಕವಾಗಿ ಪಿಡಿಒ ಲತಾ ಅವರು ಕೂಲಿಕಾರರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಡ ಕೂಲಿಕಾರ ಪರವಾಗಿ ಕೆಲಸ ಮಾಡಬೇಕಾಗಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರ ಉಳ್ಳವರ ಪರವಾಗಿ ಕೆಲಸ ಮಾಡುತ್ತಿರುವುದು ದುರಂತ. ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತರಿ ಯೋಜನೆ ಆರಂಭವಾಯಿತು ಎಂದರು.ಆದರೆ, ಈಗಿನ ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ದೇಶದ ಮಹತ್ವಾಕಾಂಕ್ಷಿ ಯೋಜನೆ ನರಳುತ್ತಿದೆ. ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ವರ್ಷಕ್ಕೆ 200 ಮಾನವ ದಿನಗಳು ಕೆಲಸ ಮತ್ತು ಒಂದು ದಿನಕ್ಕೆ 600 ಕೂಲಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ನರೇಗಾ ಎಂಜಿನಿಯರ್ ನಿರಂಜನ್ ಆಗಮಿಸಿ ಮನವಿ ಆಲಿಸಿದರು. ಅ.13 ರಂದು ಬುಧವಾರ ಎನ್.ಎಂ.ಆರ್ ತೆಗೆದು ಕೂಲಿ ಕೆಲಸ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಆದರೆ, ಪಟ್ಟು ಬಿಡದ ಕೂಲಿಕಾರರು ಆಹೋರಾತ್ರಿ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಹಲಗೂರು ವಲಯ ಸಮಿತಿ ಅಧ್ಯಕ್ಷೆ ಎಸ್.ಪಿ.ಲಕ್ಷ್ಮೀ, ಕುಂತೂರು ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್, ದುಂಡಮ್ಮ, ಪುಟ್ಟ ಲಕ್ಷ್ಮಮ್ಮ, ಪ್ರೇಮ, ವಸಂತ, ನಾಗಮ್ಮ, ಭಾರತಿ, ತೇಜಸ್ವಿನಿ, ಸುಜಾತ, ಕೃಷ್ಣ, ಮಂಜು, ಭಾಗ್ಯಮ್ಮ, ಗೌರಮ್ಮ, ಮಹೇಶ್, ಚಿಕ್ಕಕೆಂಪಮ್ಮ ಸೇರಿದಂತೆ ನೂರಾರು ಕೂಲಿಕಾರರು ಭಾಗವಹಿಸಿದ್ದರು.
ಒಕ್ಕಲಿಗ ಸದಸ್ಯತ್ವಕ್ಕೆ ನೋಂದಣಿ ಆರಂಭಮಳವಳ್ಳಿ:
ತಾಲೂಕು ಒಕ್ಕಲಿಗರ ಸಂಘಕ್ಕೆ ಹೊಸದಾಗಿ ಸದಸ್ಯತ್ವ ನೋಂದಣಿ ಆರಂಭಗೊಂಡಿದ್ದು, 2025ರ ಅಕ್ಟೋಬರ್ 10ರ ವರೆಗೆ ಸದಸ್ಯತ್ವ ಪಡೆಯಬಹುದಾಗಿದೆ.ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದವರು ಸದಸ್ಯತ್ವ ಪಡೆಯಲು ಇಚ್ಛಿಸುವವರು ಪಟ್ಟಣದ ಮೈಸೂರು ರಸ್ತೆಯ ಸಂಘದ ಕಚೇರಿಯಲ್ಲಿ 1100 ರು. ನೀಡಿ ಸದಸ್ಯತ್ವ ಪಡೆದು ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಹಾಗೂ ಚುನಾವಣೆಯಲ್ಲಿ ಭಾಗವಹಿಸಹುದು. ಗುರುತಿನ ಚೀಟಿ ಪಡೆಯದ ಹಾಲಿ ಸದಸ್ಯರು ಎರಡು ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಹಾಗೂ ರಶೀದಿಯನ್ನು ತಂದು ಕಚೇರಿಯಲ್ಲಿ ಗುರುತಿನ ಚೀಟಿ ಪಡೆಯಬಹುದು ಎಂದು ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿ.ಪಿ.ನಾಗೇಶ್ ಮೊ.9480079270, ದೇವರಾಜೇಗೌಡ ಮೊ.9611603348, ಎಂ.ಮಾದೇಶ್ ಮೊ.9448739920 ಅವರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.