ಮಕ್ಕಳಿಂದ ಚಕ್ರವ್ಯೂಹ ದೊಡ್ಡಾಟ ಪ್ರದರ್ಶನ

| Published : Jul 05 2024, 12:49 AM IST

ಮಕ್ಕಳಿಂದ ಚಕ್ರವ್ಯೂಹ ದೊಡ್ಡಾಟ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎಸ್‌. ಶರ್ಮಾ ಸಭಾಂಗಣದಲ್ಲಿ ಕಳೆದ 2 ವರ್ಷಗಳಿಂದ ಚಿಣ್ಣರಿಗೆ ನೃತ್ಯ ತರಬೇತಿ ಹಾಗೂ ಕಳೆದ 6 ತಿಂಗಳಿನಿಂದ ಚಕ್ರವ್ಯೂಹ ದೊಡ್ಡಾಟದ ತರಬೇತಿ ನೀಡಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ನೀಡಲಾಗುತ್ತಿತ್ತು. ಕಳೆದ 2 ತಿಂಗಳಿಂದ ನಿತ್ಯವೂ ಸಂಜೆ 2 ಗಂಟೆ ಮಕ್ಕಳಿಗೆ ದೊಡ್ಡಾಟದ ತರಬೇತಿ ನೀಡಿ ಮಕ್ಕಳನ್ನು ಸಿದ್ಧಗೊಳಿಸಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಮನೆಯಲ್ಲಿರುವ ಮಕ್ಕಳು ಕೈಬಿಟ್ಟು ಆಟವಾಡಿದರೆ ಸಾಕು ಎನ್ನುವವರೇ ಹೆಚ್ಚು. ಆದರೆ, ಇಲ್ಲಿ ಪುಟ್ಟಪುಟ್ಟ ಮಕ್ಕಳಿಂದಲೇ ದೊಡ್ಡಾಟ ಪ್ರದರ್ಶನ ಮಾಡಿಸುವ ಸಾಹಸಕ್ಕೆ ನಗರದ ಜನಪದ ಕಲಾಬಳಗ ಮುಂದಾಗಿದೆ.

ದೊಡ್ಡಾಟ ಪ್ರದರ್ಶನ, ಅದರ ಭಾಷೆ ಕಲಿಯಲು ದೊಡ್ಡವರೂ ಹೈರಾಣಾಗುತ್ತಾರೆ. ಆದರೆ, 10-12 ವರ್ಷದ ಚಿಣ್ಣರು ಪಟಪಟನೆ ದೊಡ್ಡಾಟದ ಭಾಷೆ, ನೃತ್ಯ ನೋಡುಗರ ಮನಸೆಳೆಯುತ್ತದೆ. ಚಿಕ್ಕಮಕ್ಕಳಾಗಿದ್ದರೂ ಸಹ ದೊಡ್ಡವರಂತೆ ಅಭಿನಯಿಸುವ ಶೈಲಿ, ಪಾತ್ರಕ್ಕೆ ತಕ್ಕಂತೆ ಅಭಿನಯದೊಂದಿಗೆ ಬಳಸುವ ಭಾಷೆಯು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

2 ವರ್ಷ ತರಬೇತಿ:

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಕೆ.ಎಸ್‌. ಶರ್ಮಾ ಸಭಾಂಗಣದಲ್ಲಿ ಕಳೆದ 2 ವರ್ಷಗಳಿಂದ ಚಿಣ್ಣರಿಗೆ ನೃತ್ಯ ತರಬೇತಿ ಹಾಗೂ ಕಳೆದ 6 ತಿಂಗಳಿನಿಂದ ಚಕ್ರವ್ಯೂಹ ದೊಡ್ಡಾಟದ ತರಬೇತಿ ನೀಡಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ನೀಡಲಾಗುತ್ತಿತ್ತು. ಕಳೆದ 2 ತಿಂಗಳಿಂದ ನಿತ್ಯವೂ ಸಂಜೆ 2 ಗಂಟೆ ಮಕ್ಕಳಿಗೆ ದೊಡ್ಡಾಟದ ತರಬೇತಿ ನೀಡಿ ಮಕ್ಕಳನ್ನು ಸಿದ್ಧಗೊಳಿಸಲಾಗಿದೆ.

ಎಲ್ಲ ಪಾತ್ರಗಳಲ್ಲೂ ಚಿಣ್ಣರೆ:

ಚಕ್ರವ್ಯೂಹ ದೊಡ್ಡಾಟದಲ್ಲಿ ಬರುವ ಎಲ್ಲ ಪಾತ್ರಗಳೂ ಮಕ್ಕಳಿಂದಲೇ ಆಡಿಸಲಾಗುತ್ತಿದೆ. ಚಿಣ್ಣರಾದ ಗಂಗೋತ್ರಿ ಕಾಮಕರ ಸಾರಥಿಯಾಗಿ, ನಿಶ್ವಿಕಾ ದ್ಯಾಮಣ್ಣವರ ಶ್ರೀಕೃಷ್ಣನಾಗಿ, ಸಿಂಚನಾ ಸುರಪುರ ಧರ್ಮಜನಾಗಿ, ಖುಷಿ ಧರಣೆಪ್ಪಗೌಡರ ಭೀಮಸೇನನಾಗಿ, ಕಿಶನ್‌ ಬಾರಕೇರ ಅರ್ಜುನನಾಗಿ, ಅಖಿಲೇಶ ಪೈ ಅಭಿಮನ್ಯುವಾಗಿ, ಫರಾಹನಾಜ ನದಾಫ ಕೌರವನಾಗಿ, ಸಾನ್ವಿ ದ್ಯಾವಣ್ಣವರ ದ್ರೋಣಾಚಾರ್ಯರಾಗಿ, ಶ್ರೀಷ ಕರಬಸಣ್ಣವರ ಕರ್ಣನಾಗಿ, ಸುಚೇತ ಬಮ್ಮಕ್ಕನವರ ದುಶ್ಯಾಸನನ ಪಾತ್ರದಲ್ಲಿ, ಈಶ್ವರಿ ಹಿರೇಮಠ ಕೃಪಾಚಾರ್ಯರಾಗಿ, ಖುಷಿ ಬಳ್ಳಾರಿ ಅಶ್ವತ್ಥಾಮನಾಗಿ, ಖುಷಿ ಪೂಜಾರಿ ಸೈಂಧವನ ಪಾತ್ರದಲ್ಲಿ, ಐಶ್ವರ್ಯ ವಾಲಿಕಾರ ಸುಭದ್ರೆಯಾಗಿ, ಲಕ್ಷ್ಮೀ ಪಾಟೀಲ ಉತ್ತರೆಯಾಗಿ ಸಮನ್ವಿ ದ್ಯಾವಣ್ಣವರ ಗಣಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು. ಹಾಗೂ ಇನ್ನುಳಿದಂತೆ ನಾಲ್ವರು ಚಿಣ್ಣರು ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.ನಾಳೆ ದೊಡ್ಡಾಟ ಪ್ರದರ್ಶನ:

ಜನಪದ ಕಲಾಬಳಗ ಟ್ರಸ್ಟ್ ಹುಬ್ಬಳ್ಳಿ ವತಿಯಿಂದ ಜು. 6ರಂದು ಸಂಜೆ 4 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಮಕ್ಕಳಿಂದಲೇ ಚಕ್ರವ್ಯೂಹ ದೊಡ್ಡಾಟ ಪ್ರದರ್ಶನ ನಡೆಯಲಿದೆ. ಕಾರ್ಮಿಕ ಮುಖಂಡ ಪ್ರೊ. ಕೆ.ಎಸ್. ಶರ್ಮಾ ಉದ್ಘಾಟಿಸುವರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಶಾಸಕ ಮಹೇಶ ಟೆಂಗಿನಕಾಯಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಸಂಕಲ್ಪ ಶೆಟ್ಟರ, ಡಾ. ವಿ.ಎಸ್.ವಿ. ಪ್ರಸಾದ್, ಉಮೇಶ ಬಿ, ಡಾ. ಲತಿಫ್ ಕುನ್ನಿಬಾವಿ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ರಮೇಶ ಕರಬಸಮ್ಮನವರ ಕನ್ನಡಪ್ರಭಕ್ಕೆ ತಿಳಿಸಿದರು.

ಪುರಾತನ, ಪೂರ್ವಜರ ಕಲೆಯಾಗಿರುವ ದೊಡ್ಡಾಟವು ಯಕ್ಷಗಾನದಂತೆ ಜನಮನ್ನಣೆಗೆ ತಲುಪಬೇಕೆಂಬುದು ಸಂಸ್ಥೆಯ ಮಹದಾಸೆ. ಈ ಕಲೆ ಕುರಿತು ಮಕ್ಕಳಲ್ಲೂ ಅರಿವು ಮೂಡಿಸುವುದಕ್ಕಾಗಿ ಮಕ್ಕಳಿಂದಲೇ ಪ್ರಥಮ ಬಾರಿಗೆ ದೊಡ್ಡಾಟ ಪ್ರದರ್ಶನ ಮಾಡಲಾಗುತ್ತಿದೆ ಎಂದು ಜನಪದ ಕಲಾಬಳದ ಟ್ರಸ್ಟ್‌ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಹೇಳಿದರು.