ಕಲ್ಯಾಣ ಕರ್ನಾಟಕದಲ್ಲಿ 19,865 ಶಿಕ್ಷಕರ ಕೊರತೆ

| Published : May 31 2024, 02:18 AM IST / Updated: May 31 2024, 01:04 PM IST

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆಯ ನಡುವೆಯೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭಿಸಲಾಗುತ್ತಿದೆ. ಪ್ರಾಥಮಿಕದಲ್ಲಿ 16245, ಪ್ರೌಢಶಾಲೆಗಳಲ್ಲಿ 3620 ಶಿಕ್ಷಕರು ಕೊರತೆ ಇದೆ.

 ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆಯ ನಡುವೆಯೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭಿಸಲಾಗುತ್ತಿದೆ. ಪ್ರಾಥಮಿಕದಲ್ಲಿ 16245, ಪ್ರೌಢಶಾಲೆಗಳಲ್ಲಿ 3620 ಶಿಕ್ಷಕರು ಕೊರತೆ ಇದೆ.

ಹೀಗಾಗಿಯೇ ಪ್ರತಿ ವರ್ಷವೂ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಕೊನೆಯ ಹತ್ತು ಸ್ಥಾನಗಳಲ್ಲಿಯೇ ಇರುತ್ತವೆ. ಆದರೂ ಸಹ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ ಮುಂದಾಗದೆ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 45431 ಶಿಕ್ಷಕರ ಹುದ್ದೆಗಳ ಪೈಕಿ ಕೇವಲ 29186 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಬರೋಬ್ಬರಿ 16245 ಶಿಕ್ಷಕರು ಕೊರತೆ ಇದ್ದಂತೆ ಆಯಿತು.

ಇನ್ನು ಪ್ರೌಢಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳ ಸಂಖ್ಯೆ 11725 ಇದ್ದರೆ ಈ ಪೈಕಿ 8105 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 3620 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಇದು, ಕೇವಲ ಅಂಕಿ-ಸಂಖ್ಯೆಯ ಲೆಕ್ಕಚಾರ ಅಷ್ಟೇ, ವಾಸ್ತವದಲ್ಲಿ ಶಿಕ್ಷಕರ ಕೊರತೆ ಇನ್ನೂ ಹೆಚ್ಚಿದೆ. ಮಕ್ಕಳ ಸಂಖ್ಯೆಯನ್ನಾಧರಿಸಿ ಶಿಕ್ಷಕರನ್ನು ನಿಗದಿ ಮಾಡಲಾಗುತ್ತದೆ. ಆದರೆ, ಒಂದೊಂದು ಶಾಲೆಗಳಲ್ಲಿ ವಿಪರೀತ ಮಕ್ಕಳು ಇದ್ದರೆ ಮತ್ತೊಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಆಗ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಹುದ್ದೆಯನ್ನು ಸೃಜಿಸುತ್ತಿರುವುದರಿಂದ ಲೆಕ್ಕಾಚಾರ ತಪ್ಪಾಗುತ್ತಿದೆ. ಹೀಗಾಗಿ, ಅದಷ್ಟೋ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿ ಮಾರ್ಪಾಡಾಗಿವೆ.

ಜಿಲ್ಲೆಯಲ್ಲಿ 30 ಏಕೋಪಾಧ್ಯಾಯ ಶಾಲೆಗಳು ಇದ್ದು, ಇಲ್ಲಿ 1ರಿಂದ 5 ತರಗತಿಗಳು ಇದ್ದರೂ ಇರುವುದು ಒಬ್ಬರೇ ಶಿಕ್ಷಕರು. ಐದು ತರಗತಿಗಳ, ಅಷ್ಟು ವಿಷಯಗಳನ್ನು ಪಾಠ ಮಾಡುವುದಾದರೂ ಹೇಗೆ ಎನ್ನುವುದು ಶಿಕ್ಷಕರ ಪ್ರಶ್ನೆ. ಇದರ ಜೊತೆಗೆ ಇರುವ ಒಬ್ಬ ಶಿಕ್ಷಕ ಬಿಸಿಯೂಟ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳನ್ನು ನೋಡಿಕೊಂಡು ಹೇಗೆ ಪಾಠ ಮಾಡಲು ಸಾಧ್ಯ ಎನ್ನುತ್ತಾರೆ ಪ್ರಜ್ಞಾವಂತರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂಥ ನೂರಾರು ಶಾಲೆಗಳು ಇರುವುದರಿಂದ ಇಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಮಕ್ಕಳ ಸಂಖ್ಯೆ ಕುಸಿಯುವುದರಿಂದ ಶಿಕ್ಷಕರನ್ನು ಕಡಿತ ಮಾಡಲಾಗುತ್ತದೆ. ಆದರೆ, ಇಲ್ಲಿ ತರಗತಿ ಮತ್ತು ವಿಷಯಗಳ ಆಧಾರದಲ್ಲಿ ಲೆಕ್ಕ ಮಾಡುವುದೇ ಇಲ್ಲ. ಉದಾಹರಣೆ 1ರಿಂದ 5ನೇ ತರಗತಿ ಇರುವ ಪ್ರಾಥಮಿಕ ಶಾಲೆಯಲ್ಲಿ 30 ವಿದ್ಯಾರ್ಥಿಗಳು ಇದ್ದರೆ ಒಬ್ಬರು ಶಿಕ್ಷಕರು, 50 ಮಕ್ಕಳಿದ್ದರೇ ಇಬ್ಬರು ಶಿಕ್ಷಕರನ್ನು ನೀಡಲಾಗುತ್ತದೆ. ಇದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಗೆ ಶಿಕ್ಷಣ ಇಲಾಖೆಯಲ್ಲಿ ಉತ್ತರವೇ ಇಲ್ಲ.

ಜಿಲ್ಲಾವಾರು ಶಿಕ್ಷಕರ ಕೊರತೆ

ಜಿಲ್ಲೆ ಪ್ರಾಥಮಿಕ ಪ್ರೌಢಶಾಲೆ

ಕೊಪ್ಪಳ 2295538

ರಾಯಚೂರು 3962856

ವಿಜಯನಗರ 1314340

ಯಾದಗಿರ 2705671

ಬೀದರ 963338

ಬಳ್ಳಾರಿ 1738448

ಕಲಬುರಗಿ 327 469

ಒಟ್ಟು 16345 3620