ಸಾರಾಂಶ
ಎಂ.ಕೆ.ಹರಿಚರಣತಿಲಕ್
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಸುಪ್ರಸಿದ್ಧ ಶಕ್ತಿದೇವತೆ ಚಂದುಗೋನಹಳ್ಳಿ ಅಮ್ಮನವರ ದರ್ಶನಕ್ಕೆ ಸಾವಿರಾರು ಭಕ್ತರು ಹರಿದು ಬರುತ್ತಿದ್ದರೂ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.
ತಾಲೂಕಿನ ಬೀರವಳ್ಳಿ, ನಾಟನಹಳ್ಳಿ ಹಾಗೂ ಬಂಡೀಹೊಳೆ ಗ್ರಾಮಗಳ ಗಡಿಗೆ ಹೊಂದಿಕೊಂಡಂತೆ ಹೇಮಾವತಿ ನದಿ ತಟದ ಮಂದಗೆರೆ ಬಲದಂಡೆ ನಾಲಾ ಬಯಲಿನಲ್ಲಿರುವ ಚಂದುಗೋನಹಳ್ಳಿ ಅಮ್ಮನವರ ಶ್ರೀಕ್ಷೇತ್ರ ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಸುಕ್ಷೇತ್ರವಾಗಿದೆ.ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಸೇರಿದಂತೆ ವಾರದ ಭಾನುವಾರ, ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ಈ ಕ್ಷೇತ್ರಕ್ಕೆ ನಾಡಿನ ವಿವಿಧ ಮೂಲೆಗಳಿಂದ ಸಾವಿರರು ಭಕ್ತರು ರೈಲು, ಬಸ್ ಮತ್ತು ಸ್ವಂತ ವಾಹನಗಳಲ್ಲಿ ಆಗಮಿಸುತ್ತಾರೆ. ಮೈಸೂರು- ಅರಸೀಕೆರೆ ರೈಲು ಮಾರ್ಗದ ಬೀರವಳ್ಳಿಯಲ್ಲಿ ರೈಲು ನಿಲ್ದಾಣವಿರುವುದು ಭಕ್ತರಿಗೆ ಅನುಕೂಲವಾಗಿದೆ.
ಬೀರವಳ್ಳಿ ಗ್ರಾಮ ಕೆ.ಆರ್.ಪೇಟೆ- ಹೊಳೇನರಸೀಪುರ ರಸ್ತೆ ಮಾರ್ಗದಲ್ಲಿದ್ದರೂ ಸಾರಿಗೆ ಬಸ್‌ಗಳ ಕೊರತೆಯಿದೆ. ಇದರಿಂದಾಗಿ ಈ ಕ್ಷೇತ್ರಕ್ಕೆ ಸ್ವಂತ ವಾಹನಗಳ್ಲಿ ಬರುವ ಭಕ್ತರ ಸಂಖ್ಯೆಯೇ ಅಧಿಕ.ಚಂದುಗೋನಹಳ್ಳಿ ಅಮ್ಮನವರ ದೇವಾಲಯ ಕೆ.ಆರ್.ಪೇಟೆ- ಹೊಳೇನರಸೀಪುರ ರಸ್ತೆ ಮಾರ್ಗದಲ್ಲಿದ್ದರೂ ರಸ್ತೆ ಮಾತ್ರ ವಿಶಾಲವಾಗಿಲ್ಲ. ಬಂಡಿಹೋಳೆ ಬಳಿ ನಿರ್ಮಿಸಿರುವ ಹೇಮಾವತಿ ನದಿ ಸೇತುವೆ ದಾಟುತ್ತಿದ್ದಂತೆಯೇ ಬೀರವಳ್ಳಿ ಗ್ರಾಮದವರೆಗೆ ಸುಮಾರು 3 ಕಿ.ಮೀ ಉದ್ದ ರಸ್ತೆ ಅತ್ಯಂತ ಕಿರಿದಾಗಿದೆ.
ಇದು ಸಿಂಗಲ್ ರಸ್ತೆಯಾಗಿರುವುದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಹತ್ತಾರು ಸಮುದಾಯ ಭವನಗಳು ತಲೆಯೆತ್ತಿವೆ. ವಾರದಲ್ಲಿ ಮೂರುದಿನ ಶಕ್ತಿದೇವತೆ ಚಂದಗೋನಹಳ್ಳಿ ಅಮ್ಮನ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ತಮ್ಮ ಹರಕೆ ತೀರಿಸಲು, ಪರ, ಬೀಗರಔತಣ, ನಾಮಕರಣ, ಮುಡಿ ತೆಗೆಸವುದು, ತಡೆ ಒಡೆಸುವುದು ಮುಂತಾದುವುಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ದೇವಾಲಯದ ಆವರಣ ಮತ್ತು ರಸ್ತೆಗಳಲ್ಲಿ ಜನಜಂಗುಳಿಯೇ ತುಂಬಿದೆ. ಇದರಿಂದ ದ್ವಿಚಕ್ರ ಮತ್ತು ವಾಹನ ಸವಾರರುಗಳಿಗೆ ವಾಹನ ಚಲಾಯಿಸುವುದು ಸವಾಲಾಗಿ ಪರಿಣಮಿಸುತ್ತದೆ. ವಾರದ ಮೂರು ದಿನಗಳಲ್ಲಿ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಸಮಯದಲ್ಲಿ ಭಕ್ತರು ತಾವು ತಲುಪಬೇಕಾದ ಸ್ಥಳ ತಲುಪಲು ಹರಸಾಹಸ ಮಾಡಬೇಕಾಗಿದೆ.ವಾಹನ ಸವಾರರು ದಾರಿಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಹಲವು ಬಾರಿ ಅರ್ಧ ಕಿ.ಮೀ. ವರೆಗೂ ಸ್ಕೂಟರ್, ಕಾರು, ಆಟೋ ಸೇರಿದಂತೆ ಹಲವು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಒಮ್ಮೆ ಟ್ರಾಫಿಕ್ ಜಾಮ್ ಆದರೆ ವಾಹನಗಳು ಹಿಂದೆ ಮುಂದೆ ಚಲಿಸಲಾರದಷ್ಟು ಸಮಸ್ಯೆಗೆ ಸಿಲುಕುತ್ತಿವೆ.
ಟ್ರಾಫಿಕ್ ಜಾಮ್ ನಿಂದ ಭಕ್ತರಿಗಷ್ಟೇ ಅಲ್ಲದೇ, ದೇವಾಲಯದ ಸುತ್ತಲ ಕೃಷಿಕರಿಗೂ ತಮ್ಮ ಹೊಲಗದ್ದೆಗಳಿಗೆ ಗೊಬ್ಬರ ಗೋಡು ಸಾಗಿಸುವುದು, ಕಬ್ಬು, ಭತ್ತ ಮುಂತಾದ ಕಟಾವು ಬೆಳೆಗಳನ್ನು ಸಾಗಿಸುವುದು ದುಸ್ತರವಾಗುತ್ತಿದೆ. ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತವಾಗಲಿ ಎಚ್ಚೆತ್ತು ಹೇಮಾವತಿ ನದಿ ಸೇತುವೆ ತಿರುವು ರಸ್ತೆಯಿಂದ ಬೀರವಳ್ಳಿ ಗ್ರಾಮದವರಗೆ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲೇಬೇಕಾಗಿದೆ.ರಸ್ತೆ ಅಗಲೀಕರಣವಾಗುವವರೆಗೆ ವಾರದ ಭಾನುವಾರ, ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ಪೊಲೀಸರನ್ನು ನಿಯೋಜಿಸಿ ಜನದಟ್ಟಣೆ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಕ್ರಮವಹಿಸಬೇಕಿದೆ ಎಂಬುದು ಸಾರ್ವಜನಿಕರು, ಭಕ್ತರ ಒತ್ತಾಯವಾಗಿದೆ.
ದೇಗುಲದ ಸಮೀಪದಲ್ಲೇ ಹೇಮಾವತಿ ನದಿಯ ಮಂದಗೆರೆ ಬಲದಂಡೆ ನಾಲೆಯು ಹಾದುಹೋಗಿದೆ. ಕಳೆದೊಂದು ದಶಕದ ಹಿಂದೆ ನೂರಾರು ಕೋಟಿ ರು ವ್ಯಯಿಸಿ ನೀರಾವರಿ ಇಲಾಖೆ ನಾಲೆ ಲೈನಿಂಗ್ ಮಾಡಿಸಿದ್ದರೂ ತಡೆಗೋಡೆಯನ್ನು ಅಳವಡಿಸಿಲ್ಲ. ನಿತ್ಯ ಹಲವು ವಾಹನಗಳು ಈ ರಸ್ತೆಯಲ್ಲಿ ಹೋಗುವುದರಿಂದ ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದುರಂತ ಸಂಭವಿಸುವ ಮೊದಲು ಕಾಲುವೆಯ ಎರಡು ಬದಿಗಳಿಗೆ ತಡೆಗೋಡೆ ನಿರ್ಮಿಸಲು ಭಕ್ತರು ಆಗ್ರಹಿಸಿದ್ದಾರೆ.ಚಂದುಗೋನಹಳ್ಳಿ ಅಮ್ಮನವರ ದೇವಾಲಯದ ಬಳಿ ಟ್ರಾಫಿಕ್ ಜಾಮ್ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ತಹಸೀಲ್ದಾರ್ ಬಳಿ ಚರ್ಚಿಸಿದ್ದು ರಸ್ತೆ ಅಗಲೀಕರಣಕ್ಕೆ ಅಗತ್ಯ ಭೂಮಿಯನ್ನು ಅಕ್ವೇರ್ ಮಾಡಲು ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಿದ್ದೇನೆ. ಭಕ್ತರ ಹಿತದೃಷ್ಟಿಯಿಂದ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮ, ಕಾಲುವೆ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ನೀರಾವರಿ ಇಲಾಖೆಗೆ ಸೂಚಿಸುತ್ತೇನೆ.
- ಎಚ್.ಟಿ.ಮಂಜು, ಶಾಸಕರು, ಕೆ.ಆರ್.ಪೇಟೆ ಕ್ಷೇತ್ರ