ಲೋಕಸಭಾ ಚುನಾವಣೆ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ: ಪೀಹಳ್ಳಿ ರಮೇಶ್ ಲೇವಡಿ

| Published : Mar 24 2024, 01:30 AM IST

ಲೋಕಸಭಾ ಚುನಾವಣೆ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ: ಪೀಹಳ್ಳಿ ರಮೇಶ್ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೇ ಆಯಾ ಉಸ್ತುವಾರಿ ಸಚಿವರ ಹತ್ತಿರದ ಸಂಬಂಧಿಕರಿಗೆ ಟಿಕೆಟ್ ನೀಡಿ ಸಚಿವರಿಗೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಪಕ್ಷದ ಕಾರ್ಯಕರ್ತರನ್ನೂ ಗುರುತಿಸಿ ಟಿಕೆಟ್ ನೀಡಲಾಗುತ್ತಿದೆ. ನಮ್ಮ ಪಕ್ಷದಲ್ಲಿ ಭಿನ್ನಮತವಿಲ್ಲ. ಮೈತ್ರಿ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಕಾರ್ಯಕರ್ತರು ದುಡಿದು ಗೆಲ್ಲಿಸುವ ವಿಶ್ವಾಸವಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯಿಂದ ಸಚಿವರ ಸಂಬಂಧಿಕರಿಗೆ ಒತ್ತಡ ಮಾಡಿ ಪಕ್ಷದಲ್ಲಿ ಟಿಕೆಟ್ ನೀಡಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಲೇವಡಿ ಮಾಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಜೀ ಅವರ ಅಲೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 28 ಕ್ಷೇತ್ರಗಳಲ್ಲಿ ಯಾರನ್ನು ನಿಲ್ಲಿಸಬೇಕು, ಯಾರನ್ನು ನಿಲ್ಲಿಸಿದರೆ ಜಯ ಸಿಗುವುದು ಎಂಬ ಆಲೋಚನೆಗಳು ಹೆಚ್ಚಾಗಿವೆ ಎಂದರು.

26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೇ ಆಯಾ ಉಸ್ತುವಾರಿ ಸಚಿವರ ಹತ್ತಿರದ ಸಂಬಂಧಿಕರಿಗೆ ಟಿಕೆಟ್ ನೀಡಿ ಸಚಿವರಿಗೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಪಕ್ಷದ ಕಾರ್ಯಕರ್ತರನ್ನೂ ಗುರುತಿಸಿ ಟಿಕೆಟ್ ನೀಡಲಾಗುತ್ತಿದೆ. ನಮ್ಮ ಪಕ್ಷದಲ್ಲಿ ಭಿನ್ನಮತವಿಲ್ಲ. ಮೈತ್ರಿ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಕಾರ್ಯಕರ್ತರು ದುಡಿದು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ಮಂಡ್ಯದಲ್ಲಿಯೂ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಜೆಡಿಎಸ್ ಪಕ್ಷದ ಚಿಹ್ನೆ ಇದ್ದರೂ ಮೋದಿ ಹೆಸರೇಳಿ ಮೈತ್ರಿ ಕೂಟದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸದೊಂದಿಗೆ ಪ್ರತಿ ಬೂತ್ ಮಟ್ಟದಲ್ಲೂ ಕಾರ್ಯಕರ್ತರು ಪ್ರತಿ ಮನೆ ಬಾಗಿಲಿಗೆ ತೆರಳಿ ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರ ಗಮನಕ್ಕೆ ತರಬೇಕು. ಎನ್‌ಡಿಎ ಅಭ್ಯರ್ಥಿ ಪರ ಮತ ಹಾಕುವಂತೆ ಮನವೊಲಿಸುವ ಕೆಲಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ಕರೆ ನೀಡಿದರು.

ಬಿಜೆಪಿ ರಾಜ್ಯ ರೈತ ಮೋರ್ಚ ಕಾರ್ಯದರ್ಶಿ ಅಶೋಕ್ ಮಾತನಾಡಿ, ಪಕ್ಷಕ್ಕೆ ಬಂದವರಲ್ಲಿ ಹಳಬರು, ಹೊಸಬರು ಅಂತ ಹೇಳುವಂತಿಲ್ಲ. ಪಕ್ಷಕ್ಕೆ ಸೇರಿಕೊಂಡವರೆಲ್ಲ ಬಿಜೆಪಿ ಪಕ್ಷದ ಕಾರ್ಯಕರ್ತರು ಎಂದು ಪಕ್ಷದ ಏಳ್ಗೆಗಾಗಿ ದುಡಿಯಬೇಕು. ಪಕ್ಷದ ಪರ ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಕೆಆರ್‌ಎಸ್ ಪ್ರಕಾಶ್, ಮಹೇಶ್, ಸತೀಶ್, ಮಂಜುನಾಥ್, ಸಂತೋಷ್, ನಂದೀಶ್, ಸಬ್ಬನಕುಪ್ಪೆ ಮಂಜುನಾಥ್, ಹೇಮಂತ್‌ಕುಮಾರ್, ಮಲ್ಲೇಶ್, ಗಂಜಂ ಮಂಜುನಾಥ್, ಸುನಿಲ್ ಸೇರಿ ಇತರ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಪಕ್ಷದ ವಿವಿಧ ಮೋರ್ಚಾಗಳಿಗೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳನ್ನು ಅಭಿನಂಧಿಸಲಾಯಿತು.