ಉಡುಪಿ: ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಜಿಜ್ಞಾಸೆಯಲ್ಲಿ ಇಂದು ನಾವಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಒಬ್ಬ ಕಲಾವಿದ ತನ್ನ ಪಾತ್ರ ಮುಗಿಸಿದ ಬಳಿಕ ಇತರರ ಪಾತ್ರವನ್ನು ನೋಡುವುದಿಲ್ಲ. ಅದರಿಂದ ಯಕ್ಷಗಾನ ಕಲಾವಿದರಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಯಕ್ಷಗಾನ ಕುರಿತು ಯಕ್ಷಗಾನ ಅಕಾಡೆಮಿ ಮಾಡಿರುವ ವೀಡಿಯೊ ದಾಖಲಾತಿಗಳನ್ನು ಜನಮಾನಸಕ್ಕೆ ಮುಟ್ಟುವ ಹಾಗೆ ಮಾಡಬೇಕು ಮತ್ತು ಇನ್ನಷ್ಟು ದಾಖಲಾತಿ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಮಾಹೆಯ ಅಧೀನದಲ್ಲಿರುವ ಆರ್ ಆರ್ ಸಿಯಲ್ಲಿರುವ ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ವೀಡಿಯೊ ದಾಖಲಾತಿಗಳನ್ನು ಯೂಟ್ಯೂಬ್ ಮೂಲಕ ಜನರಿಗೆ ತಲುಪುವ ಹಾಗೆ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್. ಮಂಜುನಾಥಸ್ವಾಮಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿದರು.ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ. ನಿ.ಬೀ. ವಿಜಯ ಬಲ್ಲಾಳ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್. ಸ್ವಾಗತಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಕಲಾವಿದರಿಂದ ‘ಬಬ್ರುವಾಹನ ಕಾಳಗ’ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಿತು.


ಪ್ರಶಸ್ತಿ ಪುರಸ್ಕೃತರು...ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಸಂಶೋಧಕ ಡಾ. ಕೆ.ಎಂ. ರಾಘವ ನಂಬಿಯಾರ್ ಅವರಿಗೆ, ಗೌರವ ಪ್ರಶಸ್ತಿಗಳನ್ನು ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಮಂಜಪ್ಪ ಆಚಾರಿ ಬಳ್ಕೂರು, ಡಿ. ಮನೋಹರ್ ಕುಮಾರ್, ಮುರಲಿ ಕಡೆಕಾರ್ ಮತ್ತು ರಮೇಶ್ ಅವರಿಗೆ ಹಾಗೂ ಯಕ್ಷಸಿರಿ ಪ್ರಶಸ್ತಿಯನ್ನು ಲಕ್ಷ್ಮಣ ಗೌಡ ಬೆಳಾಲ್, ದಾಸಪ್ಪ ಗೌಡ ಗೇರುಕಟ್ಟೆ, ಎ.ಜಿ. ನಾಗರಾಜು, ದಾಸನಡ್ಕ ರಾಮ ಕುಲಾಲ್, ರಾಜೀವ್ ಶೆಟ್ಟಿ ಹೊಸಂಗಡಿ, ಕೇಶವ ಶಕ್ತಿನಗರ, ಸದಾಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್, ಜಿ.ಕೆ. ಶ್ರೀನಿವಾಸ ಸಾಲಿಯಾನ್ ಅವರಿಗೆ ಪ್ರದಾನ ಮಾಡಲಾಯಿತು.ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ದೇವದಾಸ ರಾವ್ ಕೊಡ್ಲಿ ಅವರಿಗೆ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನವನ್ನು ಅಶೋಕ ಹಾಸ್ಯಗಾರ, ಕೆರೆಮನೆ ಶಿವಾನಂದ ಹೆಗಡೆ, ಮಣಿಪಾಲ್ ಯುನಿವರ್ಸಲ್ ಪ್ರೆಸ್ ಗೆ ಪ್ರದಾನ ಮಾಡಲಾಯಿತು.