ಸಾರಾಂಶ
ಎಂ. ಪ್ರಹ್ಲಾದ್
ಕನಕಗಿರಿ: ಅಧಿಕಾರಿಯ ನೇಮಕವಾದರೂ ಪಟ್ಟಣದಲ್ಲಿ ಉಪ ನೋಂದಣಿ ಕಚೇರಿಯ ಕಾರ್ಯಾರಂಭವಾಗದೆ ಇರುವುದು ಒಂದೆಡೆಯಾದರೆ ಮತ್ತೊಂದೆಡೆ ಅನುದಾನದ ಕೊರತೆಯೂ ಕಾಡುತ್ತಿದೆ. ಕನಕಗಿರಿಯಲ್ಲಿ ಉಪ ನೋಂದಣಿ ಕಚೇರಿ ತೆರೆಯುವುದು ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ.ಉಪ ನೋಂದಣಿ ಕಚೇರಿ ಆರಂಭಕ್ಕೆ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಎರಡು ವರ್ಷಗಳ ಹಿಂದೆಯೇ ಈ ಕಚೇರಿ ಕಾರ್ಯಾರಂಭವಾಗಬೇಕಿತ್ತು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ತಾಲೂಕಿನ ಜನತೆ ಸಮಸ್ಯೆ ಅನುಭವಿಸುವಂತಾಗಿದೆ.
ತಾಲೂಕು ವ್ಯಾಪ್ತಿಯ ನವಲಿ ಹೋಬಳಿಯು ಕಾರಟಗಿ ಉಪ ನೋಂದಣಿ ಕಚೇರಿ ಸೇರ್ಪಡೆಯಾಗಿದ್ದರಿಂದ ಕನಕಗಿರಿಯಲ್ಲಿ ಉಪ ನೋಂದಣಿ ಕಚೇರಿ ಕಾರ್ಯಾರಂಭಕ್ಕೆ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿತ್ತು. ಇದೀಗ ತಾಂತ್ರಿಕ ಲೋಪ ಸರಿಪಡಿಸಲಾಗಿದೆ.ಈಗಾಗಲೇ ಶ್ರೀ ಕನಕಾಚಲಪತಿ ದೇವಸ್ಥಾನದ ಯಾತ್ರಿನಿವಾಸ ಕಟ್ಟಡ ಬಾಡಿಗೆ ಪಡೆದುಕೊಳ್ಳಲಾಗಿದೆ. ಕಚೇರಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿ. ನಾಗೇಂದ್ರಪ್ಪ ಎನ್ನುವವರನ್ನು ನೋಂದಣಿ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಆದರೆ ಕಚೇರಿಯಲ್ಲಿ ಕೆಲಸ ನಡೆಯುತ್ತಿಲ್ಲ. ಈ ಕಚೇರಿಗಾಗಿ ದಶಕಗಳ ಹೋರಾಟ ಮಾಡಿದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಅನುದಾನದ ಕೊರತೆ?: ಕಚೇರಿ ಆರಂಭಿಸಲು ಲಕ್ಷಾಂತರ ರು. ಅನುದಾನದ ಅವಶ್ಯವಿದೆ. ಸದ್ಯ ಈ ಕಚೇರಿಗೆ ಯಾವ ಅನುದಾನವೂ ಇಲ್ಲದೇ ಇರುವುದು ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಚೇರಿಯ ಸೀಲ್ ಮಾಡಿಸಲು ಅನುದಾನ ಇಲ್ಲ ಎಂದಾದರೆ ಕಚೇರಿ ಆರಂಭಿಸುವುದಾದರೆ ಹೇಗೆ? ಪೀಠೋಪಕರಣಗಳ ಖರೀದಿ, ವಿದ್ಯುತ್ ಸಂಪರ್ಕ, ಕಟ್ಟಡದ ಬಾಡಿಗೆ, ಕೆಲಸಗಾರರ ವೇತನ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಏಕಾಏಕಿ ಕಚೇರಿ ಆರಂಭ ಮಾಡಲು ಸಾಧ್ಯವಿಲ್ಲ. ಹಣಕಾಸಿನ ಸಮಸ್ಯೆ ಪರಿಹಾರವಾದರೆ ಕಚೇರಿ ಆರಂಭಿಸಲು ಸಮಸ್ಯೆ ಇಲ್ಲ ಎಂದು ಅಧಿಕಾರಿಯೊಬ್ಬರು ''''ಕನ್ನಡಪ್ರಭ''''ಕ್ಕೆ ಸ್ಪಷ್ಟಪಡಿಸಿದ್ದಾರೆ.ಕಚೇರಿಗೆ ಬೇಕಾದ ಸಾಮಗ್ರಿಗಳ ಜೋಡಿಸಿಕೊಳ್ಳಬೇಕಾಗಿದೆ. ಕಚೇರಿಯನ್ನು ಅಚ್ಚುಕಟ್ಟಾಗಿ ವಿಂಗಡಿಸಬೇಕಾಗಿದೆ. ಹೊಸ ಕಚೇರಿ ತೆರೆಯಲು ಹೆಚ್ಚು ಕೆಲಸಗಳಿರುತ್ತವೆ. ಇವೆಲ್ಲವೂ ಬಗೆಹರಿದ ಆನಂತರ ಕನಕಗಿರಿಯಲ್ಲಿ ಉಪ ನೋಂದಣಿ ಕಚೇರಿ ಕಾರ್ಯಾರಂಭ ಮಾಡಲಾಗುವುದು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಕನಕಗಿರಿ ನೋಂದಣಿ ಅಧಿಕಾರಿ ಬಿ. ನಾಗೇಂದ್ರಪ್ಪ ಹೇಳುತ್ತಾರೆ.ಈಗಾಗಲೇ ಕನಕಗಿರಿಯ ಉಪ ನೋಂದಣಿ ಕಚೇರಿಗೆ ಪ್ರಭಾರಿಯಾಗಿ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಹೊಸ ಕಚೇರಿ ಬೇಕಾದ ಪೀಠೋಪಕರಣಗಳು ಖರೀದಿಸುವ ಮೂಲಕ ಕಚೇರಿ ಉದ್ಘಾಟಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳುತ್ತಾರೆ.