ಹರಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಮೂಲಸೌಕರ್ಯ ಕೊರತೆ

| Published : May 25 2024, 12:47 AM IST

ಸಾರಾಂಶ

ನೈಋತ್ಯ ರೈಲ್ವೆಗೆ ಒಳಪಡುವ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಹರಪನಹಳ್ಳಿ ರೈಲ್ವೆ ನಿಲ್ದಾಣ ಪ್ರಾರಂಭವಾಗಿ ದಶಕ ಕಳೆದಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿ ಇರುವ ರೈಲ್ವೆ ನಿಲ್ದಾಣಕ್ಕೆ ಮೂಲ ಸೌಕರ್ಯದ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.

ನೈಋತ್ಯ ರೈಲ್ವೆಗೆ ಒಳಪಡುವ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಹರಪನಹಳ್ಳಿ ರೈಲ್ವೆ ನಿಲ್ದಾಣ ಪ್ರಾರಂಭವಾಗಿ ದಶಕ ಕಳೆದಿದೆ. ಆದರೂ ರೈಲ್ವೆ ನಿಲ್ದಾಣಕ್ಕೆ ತೆರಳಲು ಸರಿಯಾದ ರಸ್ತೆ, ಸಾರಿಗೆ, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಪಟ್ಟಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಬಸ್ ಸಂಪರ್ಕ ಇಲ್ಲದಿರುವುದರಿಂದ ಪ್ರಯಾಣಿಕರು ಖಾಸಗಿ ವಾಹನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ರಾತ್ರಿ ವೇಳೆ ಬರುವ ಪ್ರಯಾಣಿಕರು ಪಟ್ಟಣ ತಲುಪಲು ಹರಸಹಾಸ ಪಡಬೇಕಾಗಿದೆ. ಆಟೋ ಮೂಲಕ ಬಸ್ ನಿಲ್ದಾಣ ತಲುಪಬೇಕೆಂದರೆ ಕನಿಷ್ಠ ಒಬ್ಬ ವ್ಯಕ್ತಿ ₹50 ನೀಡಬೇಕಾಗಿದೆ. ಆಟೋ ಸಿಗದೇ ಇದ್ದರೆ ಕಾಲು ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಸ್ತು ಸ್ಥಿತಿಗೆ ಹಿಡಿದ ಕನ್ನಡಿ.

ರೈಲ್ವೆ ನಿಲ್ದಾಣದಿಂದ ಕಂಚಿಕೇರಿ-ಬೆಂಡಿಗೇರಿ ಮುಖ್ಯ ರಸ್ತೆಯನ್ನು ತಲುಪಲು ಸರಿಯಾದ ರಸ್ತೆ ಇಲ್ಲ. ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿ ವಿಷ ಜಂತುಗಳ ಕಾಟ ಇರುತ್ತದೆ. ಹೀಗಾಗಿ ಪ್ರಯಾಣಿಕರು ಜೀವ ಕೈಯಲ್ಲಿಡಿದು ಮೊಬೈಲ್ ಟಾರ್ಚ್ ಮೂಲಕ ಮುಖ್ಯ ರಸ್ತೆಗೆ ತಲುಪಬೇಕಿದೆ. ತಡವಾಗಿ ಬಂದರೆ ರಾತ್ರಿ ವೇಳೆ ನಿಲ್ದಾಣದಲ್ಲಿ ತಂಗಲು ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲ.

ಈ ಬಗ್ಗೆ ಕಂಚಿಕೇರಿ ಬೆಂಡಿಗೇರಿ ಮಾರ್ಗವಾಗಿ ದಾವಣಗೆರೆಗೆ ಹೋಗುವ ಎಲ್ಲ ಸಾರಿಗೆ ಬಸ್‌ಗಳನ್ನು ರೈಲ್ವೆ ನಿಲ್ದಾಣದ ಮುಖ್ಯ ರಸ್ತೆ ಬಳಿ ಕೋರಿಕೆ ನಿಲುಗಡೆ ಒದಗಿಸುವಂತೆ ರೈಲ್ವೆ ನಿಲ್ದಾಣದ ಅಧೀಕ್ಷಕರು ಹರಪನಹಳ್ಳಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಬಸ್ ಸ್ಟಾಪ್ ಮಾಡುತ್ತಿಲ್ಲ. ಇನ್ನು ರಸ್ತೆ ಬದಿ ದೀಪದ ವ್ಯವಸ್ಥೆ ಕಲ್ಪಿಸಲು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ರೈಲ್ವೆ ಸಿಬ್ಬಂದಿ ತಿಳಿಸುತ್ತಾರೆ.

ಯಶವಂತಪುರ, ವಿಜಯಪುರ, ಬಳ್ಳಾರಿ, ಹರಿಹರ ಸೇರಿದಂತೆ ನಿತ್ಯ ಒಟ್ಟು ಆರು ರೈಲುಗಳು ಈ ನಿಲ್ದಾಣದಿಂದ ಸಂಚರಿಸುತ್ತವೆ. ಹರಪನಹಳ್ಳಿ ನಿಲ್ದಾಣದಲ್ಲಿ ಆರು ಮಾನಿಟರಿಂಗ್ ಆಪರೇಟರ್, 92 ಟ್ರ್ಯಾಕ್‌ ಮೆಂಟೇನರ್‌ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರೈಲು ಸಂಚಾರ ಪ್ರಾರಂಭವಾಗಿದೆ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಸೂಕ್ತ ರಸ್ತೆ, ಸಾರಿಗೆ, ಬೆಳಕಿನ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಅರಿತು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಸೂಕ್ತ ಸೌಕರ್ಯ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮುಖ್ಯ ರಸ್ತೆ ಬಳಿ ಕೋರಿಕೆ ನಿಲುಗಡೆ ಒದಗಿಸುವಂತೆ ಸಾರಿಗೆ ಇಲಾಖೆಯವರಿಗೆ ಮನವಿ ಮಾಡಿಕೊಂಡಿದ್ದೇವೆ. ಇನ್ನು ರಸ್ತೆ ಬದಿ ಲೈಟ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ರೈಲ್ವೆ ಸ್ಟೇಷನ್ ಮಾಸ್ಟರ್ ಗುರುರಾಜ.

ಹರಪನಹಳ್ಳಿ ಪಟ್ಟಣದಿಂದ ರೈಲ್ವೆ ನಿಲ್ದಾಣ ಸುಮಾರು ಮೂರು ಕಿ.ಮೀ ದೂರದಲ್ಲಿದೆ. ನಿಲ್ದಾಣಕ್ಕೆ ಹೋಗಲು ಸಾರಿಗೆ ಸಂಪರ್ಕವಿಲ್ಲ. ದೀಪದ ವ್ಯವಸ್ಥೆ ಇಲ್ಲ. ರಸ್ತೆ ಸರಿಯಾಗಿ ಇಲ್ಲ. ಹೀಗಾಗಿ ಪ್ರಯಾಣಿಕರಿಗೆ ರಾತ್ರಿ ವೇಳೆ ಹೋಗಲು ತೊಂದರೆ ಆಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎನ್ನುತ್ತಾರೆ ಬ್ರೂಸ್‌ಪೇಟೆ ನಿವಾಸಿ ಸಂತೋಷಕುಮಾರ.