ನಿರ್ವಹಣೆ ಕೊರತೆ: ಶುದ್ಧ ನೀರಿನ ಘಟಕ ಸ್ಥಗಿತ

| Published : Nov 04 2025, 12:00 AM IST

ಸಾರಾಂಶ

ಬಂಗಾರಪೇಟೆ ತಾಲೂಕಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ಜನರಿಗೆ ಶುದ್ಧೀಕರಿಸಿದ ಹಾಗೂ ಫ್ಲೋರೈಡ್ ಮುಕ್ತ ನೀರನ್ನು ಒದಗಿಸುವ ಸಲುವಾಗಿ ಸರ್ಕಾರ ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ೨೧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು ೧೩೧ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿತ್ತು. ಈಗ ಇವುಗಳಲ್ಲಿ ಬಹುತೇಕ ಸ್ಥಗಿತಗೊಂಡಿವೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಹತ್ತಾರು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ಜನರಿಗೆ ಶುದ್ಧೀಕರಿಸಿದ ಹಾಗೂ ಫ್ಲೋರೈಡ್ ಮುಕ್ತ ನೀರನ್ನು ಒದಗಿಸುವ ಸಲುವಾಗಿ ಸರ್ಕಾರ ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ೨೧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು ೧೩೧ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ.

ಘಟಕಗಳಲ್ಲಿ ನಿರ್ವಹಣೆ ಕೊರತೆ

ಆರಂಭದಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟಕಗಳು ಕಾಲ ಕ್ರಮೇಣ ತಾಂತ್ರಿಕ ಸಮಸ್ಯೆ ನಿರ್ವಹಣೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಗೆ ಸುಮಾರು ೩೦ ಕ್ಕೂ ಹೆಚ್ಚಿನ ಘಟಕಗಳು ನಿಷ್ಕ್ರಿಯಗೊಂಡಿದೆ. ಇದರಿಂದಾಗಿ ಸರ್ಕಾರದ ಕುಡಿಯುವ ನೀರನ್ನು ಒದಗಿಸುವ ಯೋಜನೆ ಹಳ್ಳ ಹಿಡಿದಿದ್ದು, ಜನಸಾಮಾನ್ಯರ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಶುದ್ದ ಕುಡಿಯುವ ನೀರಿನ ಘಟಕಗಳನ್ನು ವಿವಿಧ ಏಜೆನ್ಸಿ ಅಥವಾ ಕಂಪನಿಗಳ ಮೂಲಕ ನಿರ್ಮಿಸಲಾಗಿದೆ. ಅದರ ನಿರ್ವಹಣೆಯ ಜವಾಬ್ದಾರಿ ಸಹ ಏಜೆನ್ಸಿಯ ಮೇಲಿದೆ ಆದರೆ ಏಜೆನ್ಸಿ ಮತ್ತು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷದಿಂದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ನಿರ್ವಹಿಸದೇ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಹಲವು ಘಟಕಗಳು ಸ್ಥಗಿತ

ಗ್ರಾಮಗಳಲ್ಲಿ ಇರುವಂತಹ ಘಟಕಗಳನ್ನು ಪಂಚಾಯಿತಿಯವರು ಏಜೆನ್ಸಿಯವರಿಂದ ಹಸ್ತಾಂತರಿಸಿಕೊಂಡು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ. ಆದರೆ ಪಂಚಾಯತಿ ಅಧಿಕಾರಿಗಳು ಅದರ ಕಡೆ ಗಮನ ಹರಿಸದ ಪರಿಣಾಮ ಹಲವು ಘಟಕಗಳು ಸ್ಥಗಿತಗೊಂಡಿದ್ದು, ಗ್ರಾಮೀಣ ಜನತೆಗೆ ಶುದ್ದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದ್ದರೂ ರಿಪೇರಿ ಮಾಡಲು ಯಾರೂ ಸಹ ಮುಂದಾಗದೆ ಇರುವುದರಿಂದ ಶುದ್ದ ಕುಡಿಯುವ ನೀರನ್ನು ತರಲು ದೂರದ ಗ್ರಾಮಗಳಿಗೆ ಹೋಗಬೇಕಾದ ಅನಿವಾರ್ಯವಿದೆ.

ದೋಣಿಮಡಗು, ಪೊಲೇನಹಳ್ಳಿ, ಕದರಿನತ್ತ, ಬತ್ತಹಳ್ಳಿ, ಮುಷ್ಟ್ರಹಳ್ಳಿ ಘಟಕ ಇದ್ದರೂ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ. ಇದರಿಂದಾಗಿ ಜನತೆ ಫ್ಲೋರೈಡ್ ನೀರು ಕುಡಿಯುವಂತಾಗಿದೆ. ಬೂದಿಕೋಟೆ, ದಿನ್ನಕೊತ್ತೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿರ್ಮಿಸಲಾಗುತ್ತಿರುವ ಘಟಗಳ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಆ ಗ್ರಾಮಗಳ ಜನರೂ ವಿಧಿ ಇಲ್ಲದೆ ಪ್ಲೋರೈಡ್ ಯುಕ್ತ ನೀರನ್ನೇ ಸೇವಿಸಬೇಕಿದೆ.

ಅಧಿಕಾರಿಗಳ ನಿರ್ಲಕ್ಷ್ಯ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತ ದೃಷ್ಠಿಯಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಶೀಘ್ರವಾಗಿ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ಸರಿಪಡಿಸಿ, ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.