ಸಾರಾಂಶ
ಗುಂಡ್ಲುಪೇಟೆ : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಾರಿಗೆ ಬಸ್‌ಗಳ ನಿರ್ವಹಣೆ ಕೊರತೆಯಿಂದ ತಾಲೂಕಿನ ಗ್ರಾಮಾಂತರ ಪ್ರದೇಶದ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ, ದುರಂತ ಎಂದರೆ ಕುಂದಕೆರೆಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಹಿಂಬದಿ ಚಕ್ರ ಕಳಚಿ ಬಿದ್ದಿದೆ.
ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಮಾರ್ಗದಲ್ಲಿ ಬರುವ ಬಸ್ಸುಗಳು ದಿನ ನಿತ್ಯ ಅಲ್ಲೊಂದು ಇಲ್ಲೊಂದು ಕೆಟ್ಟು ರಸ್ತೆಯಲ್ಲಿ ನಿಲ್ಲುವ ಕಾರಣ ಪ್ರಯಾಣಿಕರಿಗೆ ಗಂಟೆಗಟ್ಟಲೆ ಬಸ್ ಬಳಿ ನಿಂತು ಪರದಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ವಾರದಲ್ಲಿ ನಾಲ್ಕು ಬಸ್ಸುಗಳು ಈ ರೀತಿ ಕೆಟ್ಟು ರಸ್ತೆಯಲ್ಲಿ ನಿಂತಿವೆ. ಇದೇ ರೀತಿ ಬಸ್ಸುಗಳು ನಿಂತರೆ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ ಎಂಬ ಅರಿವು ಇಲ್ಲಿನ ಘಟಕ ವ್ಯವಸ್ಥಾಪಕರಿಗೆ ಇಲ್ಲವೆ ಎಂದು ಕಾಂಗ್ರೆಸ್ ಯುವ ಮುಖಂಡ ಶಿವಪುರ ಮಂಜಪ್ಪ ದೂರಿದ್ದಾರೆ.
ಬಸ್ಸುಗಳ ರಿಪೇರಿ ಮಾಡಿಸದೆ ಬಸ್ ಇದ್ದಂಗೆ ಓಡಿಸಿ ಕಡಿಮೆ ಖರ್ಚು ಮಾಡಿದರೆ ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಖರ್ಚು ಕಡಿಮೆ ತೋರಿಸಲು ಈ ರೀತಿ ಮಾಡುತ್ತಿರುವುದರಿಂದ ಬಸ್ಸುಗಳ ನಿರ್ವಹಣೆ ಅಸಾಧ್ಯ ಹಾಗೂ ಹತ್ತಕ್ಕೂ ಹೆಚ್ಚು ಬಸ್ಸುಗಳು ರಿಪೇರಿ ಆಗದೆ ಬಸ್ ಡಿಪೋದಲ್ಲೇ ಕೆಟ್ಟು ನಿಂತಿದೆ ಎಂದಿದ್ದಾರೆ. ಕೂಡಲೇ ಎಲ್ಲ ಬಸ್ಸುಗಳನ್ನು ದುರಸ್ತಿ ಪಡಿಸಿ, ಅಲ್ಲದೆ ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಘಟಕ ವ್ಯವಸ್ಥಾಪಕರು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಶನಿವಾರ ಕುಂದಕೆರೆ ಮಾರ್ಗದ ಬಸ್ ಮತ್ತೆ ವೀಲ್ ಕಳೆದುಕೊಂಡು ಬಸ್ ನಿಂತಿದೆ. ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು? ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಇತ್ತ ಗಮನಹರಿಸಿ ಬಸ್‌ಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.