ಕೇಂದ್ರದ ಧೋರಣೆಗೆ ಗೊಬ್ಬರ ಕೊರತೆ: ಚೆಲುವ

| Published : Jul 31 2025, 12:45 AM IST

ಸಾರಾಂಶ

ಕೇಂದ್ರ ಸರ್ಕಾರವು ಯೂರಿಯಾ ಪೂರೈಕೆಯಲ್ಲೂ ರಾಜ್ಯದ ಮೇಲಿನ ಮಲತಾಯಿ ಧೋರಣೆ ತೋರಿದ್ದು, ಬೇಡಿಕೆಯಷ್ಟು ರಸಗೊಬ್ಬರ ಸರಬರಾಜು ಮಾಡದ ಕಾರಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರವು ಯೂರಿಯಾ ಪೂರೈಕೆಯಲ್ಲೂ ರಾಜ್ಯದ ಮೇಲಿನ ಮಲತಾಯಿ ಧೋರಣೆ ತೋರಿದ್ದು, ಬೇಡಿಕೆಯಷ್ಟು ರಸಗೊಬ್ಬರ ಸರಬರಾಜು ಮಾಡದ ಕಾರಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ನಾನೇ ಕೃಷಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗ ಸಮಸ್ಯೆಯಾಗದ್ದು, ಈಗ ಸಮಸ್ಯೆಯಾಗುತ್ತಿದೆ ಎಂದರೆ ಅದನ್ನು ವಿಶ್ಲೇಷಿಸಬೇಕು. ಅದರ ಜತೆ ಬಿಜೆಪಿ ನಾಯಕರಾದ ಆರ್‌.ಅಶೋಕ್‌, ಬಿ.ವೈ.ವಿಜಯೇಂದ್ರ ಇನ್ನಿತರರು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಹಾಗೂ ಈ ಬಾರಿ ಕೇಂದ್ರ ಸರ್ಕಾರ ನಿಗದಿತ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡದ ಕಾರಣದಿಂದಲೇ ಸಮಸ್ಯೆ ಉದ್ಭವವಾಗಿದೆ. ಅವರು ಮೊದಲು ರಾಜ್ಯಕ್ಕೆ ರಸಗೊಬ್ಬರವನ್ನು ಕೇಂದ್ರ ಸರ್ಕಾರದಿಂದ ಸರಬರಾಜು ಮಾಡಲಾಗುತ್ತದೆ ಎಂಬುದನ್ನು ಅರಿತು ಮಾತನಾಡಬೇಕು ಎಂದರು.ರಾಜ್ಯದಲ್ಲಿನ ಬೇಡಿಕೆಯಂತೆ ಕೇಂದ್ರ ಸರ್ಕಾರ ನಿಗದಿತ ಪ್ರಮಾಣದಲ್ಲಿ ಯೂರಿಯಾ ಪೂರೈಕೆಸಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ 1.36 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಕೊರತೆಯಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಸರಬರಾಜು ನಿರ್ಲಕ್ಷ್ಯವೇ ಕಾರಣ. ಅದರ ಜತೆಗೆ ಮುಂಗಾರು ಬೇಗ ಆರಂಭ, ಉತ್ತಮ ಮಳೆಯಾದ ಕಾರಣದಿಂದಾಗಿ ಹೆಚ್ಚುವರಿಯಾಗಿ 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಇದರಿಂದ ಯೂರಿಯಾ ಬೇಡಿಕೆ ಹಠಾತ್‌ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಯೂರಿಯಾ ಪೂರೈಕೆ ಮಾಡಿಲ್ಲ. ಇದು ರಸಗೊಬ್ಬರ ಸಮಸ್ಯೆ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.ಬಿಜೆಪಿಯಿಂದ ಮನಬಂದಂತೆ ಮಾತು:ಬಿಜೆಪಿ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಪೂರೈಕೆಯಾಗುವ ರಸಗೊಬ್ಬರವನ್ನು ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅವರಿಗೆ ಬುದ್ಧಿ ಇದೆಯೋ, ಇಲ್ಲವೋ ತಿಳಿಯುತ್ತಿಲ್ಲ. ಶ್ರೀಲಂಕಾ, ಬಾಂಗ್ಲಾದೇಶಕ್ಕೆ ರಸಗೊಬ್ಬರ ಹೋಗುತ್ತಿದ್ದರೆ, ಅದನ್ನು ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು, ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲಾಗುತ್ತಿದೆ. ರಾಜಕೀಯ ಮಾಡುವ ವಿಚಾರದಲ್ಲಿ ನಾವೆಲ್ಲರೂ ರಾಜಕೀಯ ಮಾಡೋಣ. ಆದರೆ, ರೈತರ ವಿಚಾರದಲ್ಲಿ ರಾಜಕೀಯ ಮಾಡಲು ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಗ್ಯಾರಂಟಿ ಹಣ ಕಡಿತ:ರಸಗೊಬ್ಬರ ಪೂರೈಕೆಗೆ ಇರಿಸಲಾಗಿದ್ದ ಗ್ಯಾರಂಟಿ ಹಣ ಕಡಿತಗೊಳಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಈ ಹಿಂದೆ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದ 400 ಕೋಟಿ ರು. ಅನ್ನು ನಾವು ಯಥಾಸ್ಥಿತಿಯಲ್ಲಿ ಮುಂದುವರಿಸಿದ್ದು, ಇನ್ನೂ 600 ಕೋಟಿ ರು. ಹೆಚ್ಚುವರಿ ಹಣ ನೀಡಲು ಸರ್ಕಾರ ಸಿದ್ಧವಿದೆ. ರಾಜ್ಯದ ದಾವಣಗೆರೆ, ಗದಗ, ಕೊಪ್ಪಳ, ಧಾರವಾಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಕಂಡು ಬಂದಿದೆ. ಆ ಸಮಸ್ಯೆ ನಿವಾರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಪರ್ಯಾಯ ಕ್ರಮ ಏನು ಎಂಬ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.ಬೇರೆ ರಾಜ್ಯಗಳಿಗೂ ಸಮಸ್ಯೆ:ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ಇತರ ರಾಜ್ಯಗಳಿಗೂ ರಸಗೊಬ್ಬರ ಕೊರತೆ ಉಂಟಾಗಿದೆ. ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗಿಲ್ಲ ಎಂಬ ಮಾಹಿತಿಯಿದೆ. ಇನ್ನು ನಮ್ಮಲ್ಲಿ ರಸಗೊಬ್ಬರ ಕೊರತೆ ಉಂಟಾಗಿ ಬೇರೆ ರಾಜ್ಯಗಳಿಂದ ತರಿಸಿಕೊಳ್ಳುವುದಕ್ಕೂ ನಿಯಮದಲ್ಲಿ ಅವಕಾಶವಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ರಸಗೊಬ್ಬರ ಪೂರೈಸಬೇಕು. ಅದರಿಂದಷ್ಟೇ ಸಮಸ್ಯೆ ಬಗೆಹರಿಯಲಿದೆ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ಕೇಂದ್ರ ಸಚಿವರ ಭೇಟಿ ಮಾಡಿ ಮನವಿ:ರಾಜ್ಯದಲ್ಲಿ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಪೂರೈಕೆ ಕೊರತೆಗೆ ಸಂಬಂಧಿಸಿ ಜು.7ರಂದೇ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು. ಅದರ ಜತೆ ರಾಜ್ಯದ ಕೇಂದ್ರ ಸಚಿವರು, ಸಂಸದರಿಗೂ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೋರಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮನವಿ ಮಾಡಿದ್ದಾರೆ. ಇದರ ನಡುವೆಯೂ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಮತ್ತು ಕೃಷಿ ಸಚಿವ ಶಿವರಾಜ್‌ ಸಿಂಗ್‌ ರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಅದಕ್ಕೆ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.ನ್ಯಾನೋ ಯೂರಿಯಾ ಬಳಕೆಗೆ ಕ್ರಮ:ಕೇಂದ್ರ ಸರ್ಕಾರ ನ್ಯಾನೋ ಯೂರಿಯಾ ಬಳಕೆಗೆ ತಿಳಿಸಿದೆ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ರೈತರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅದರಿಂದಾಗಿ ಈ ವರ್ಷ 38 ಸಾವಿರ ಮೆಟ್ರಿಕ್‌ ಟನ್‌ ಡಿಐಪಿ ಬಳಕೆ ಕಡಿಮೆಯಾಗಿದೆ. ಆದರೆ, ಒಮ್ಮೆಲೆ ರೈತರಿಗೆ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದರು.ರಸಗೊಬ್ಬರ ಪೂರೈಕೆ ವಿವರ:- ಕೇಂದ್ರದಿಂದ ಏಪ್ರಿಲ್‌ನಿಂದ ಜುಲೈವರೆಗೆ 6.82 ಲಕ್ಷ ಮೆ.ಟನ್‌ ಹಂಚಿಕೆ- ಏಪ್ರಿಲ್‌ನಿಂದ ಈವರೆಗೆ 5.46 ಲಕ್ಷ ಮೆ.ಟನ್‌ ಗೊಬ್ಬರ ಸರಬರಾಜು- ಸದ್ಯ ಉಳಿಕೆ ದಾಸ್ತಾನು 1.22 ಲಕ್ಷ ಮೆ.ಟನ್‌- ಈವರೆಗಿನ ಸರಬರಾಜು ಕೊರತೆ 1.36 ಲಕ್ಷ ಮೆ.ಟನ್‌