ಯುವಕರಲ್ಲಿ ಆಧುನಿಕ ಉದ್ಯಮದ ಕೌಶಲ್ಯದ ಕೊರತೆ: ಕುಲಪತಿ ಡಾ.ಅನಿಲಕುಮಾರ ಬಿಡವೆ

| Published : Jun 01 2024, 12:47 AM IST

ಯುವಕರಲ್ಲಿ ಆಧುನಿಕ ಉದ್ಯಮದ ಕೌಶಲ್ಯದ ಕೊರತೆ: ಕುಲಪತಿ ಡಾ.ಅನಿಲಕುಮಾರ ಬಿಡವೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕನೇ ಹಂತದ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿ ನಾವಿದ್ದೇವೆ. ಕೆಲವು ಅನಗತ್ಯ ಉದ್ಯೋಗಗಳು ಕಣ್ಮರೆಯಾಗಲಿವೆ.

ಹೊಸಪೇಟೆ: ಇಂದಿನ ಯುವಕರಲ್ಲಿ ಆಧುನಿಕ ಉದ್ಯಮಕ್ಕೆ ಬೇಕಾದ ಕೌಶಲ್ಯದ ಕೊರತೆ ಕಾಣುತ್ತದೆ. ಡೆಸ್ಸೌಲ್ಟ್ ವರದಿ ಪ್ರಕಾರ ಜಗತ್ತಿನಲ್ಲಿ ಸುಮಾರು ೮೫ ದಶಲಕ್ಷ ಹುದ್ದೆಗಳು ಅಗತ್ಯ ಕೌಶಲ್ಯದ ಕೊರತೆಯಿಂದ ಖಾಲಿ ಬಿದ್ದಿವೆ ಎಂದು ಕಲಬುರಗಿಯ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಅನಿಲಕುಮಾರ ಬಿಡವೆ ಕಳವಳ ವ್ಯಕ್ತಪಡಿಸಿದರು.

ನಗರದ ಪಿಡಿಐಟಿ ಕಾಲೇಜಿನಲ್ಲಿ ಶುಕ್ರವಾರ ಪದವಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕನೇ ಹಂತದ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿ ನಾವಿದ್ದೇವೆ. ಕೆಲವು ಅನಗತ್ಯ ಉದ್ಯೋಗಗಳು ಕಣ್ಮರೆಯಾಗಲಿವೆ. ಚಂದ್ರಯಾನದ ಯಶಸ್ಸಿಗೆ ಎರಡು, ಮೂರನೇ ಹಂತದ ನಗರಗಳ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದ ಯುವಕರು ಕಾರಣಕರ್ತರಾಗಿದ್ದಾರೆ. ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಯುವಕರು ನಾಡಿನ ಸೇವೆಯನ್ನು ಬಿಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ಇದನ್ನೆಲ್ಲ ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ಕಲಿತ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯೆಯನ್ನು ಹಿಂದುಳಿದ, ಅಲಕ್ಷಿತ ಪ್ರದೇಶಕ್ಕೆ ಧಾರೆ ಎರೆಯಬೇಕು ಎಂದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ತಿಪ್ಪೇರುದ್ರಪ್ಪ ಜೆ. ಮಾತನಾಡಿ, ಧನಾತ್ಮಕ ಮನೋಭಾವದ ಮೂಲಕ ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಉತ್ತಮ ಚಿಂತನೆ, ಜನರ ವಿಶ್ವಾಸ, ಸಮಾಜದ ಬಗ್ಗೆ ಕಳಕಳಿ ಹೊಂದಿರಬೇಕು ಎಂದರು.

ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಮಾತನಾಡಿ, 109 ವರ್ಷಗಳ ಇತಿಹಾಸವುಳ್ಳ ವೀರಶೈವ ವಿದ್ಯಾವರ್ಧಕ ಸಂಘವು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅಕ್ಷರ ದಾಸೋಹ ಮಾಡುತ್ತಾ ಬಂದಿದೆ. ಇಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ವಿಶ್ವಾದ್ಯಂತ ನೈಪುಣ್ಯತೆ ಕೆಲಸ ಮಾಡುತ್ತಿದ್ದಾರೆ. ಕೊರೋನ ಕಾಲಘಟ್ಟದಲ್ಲಿ ಎಷ್ಟೋ ರಾಷ್ಟ್ರಗಳು ದಿವಾಳಿಯಾಗಿವೆ. ಆದರೆ ಸದೃಢ ಭಾರತವು ಕೌಶಲ್ಯಾಭಿವೃದ್ಧಿಯಿಂದ ಇವೆಲ್ಲವನ್ನೂ ಮೀರಿ ನಿಂತಿದೆ. ಹೊಸಪೇಟೆ ಸುತ್ತಲಿನ ಮೈನಿಂಗ್ ಹಬ್‌ಗಳು ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತದ ಭವಿಷ್ಯ ಬರೆಯಲು ತಾಂತ್ರಿಕರು ನಮ್ಮಲ್ಲೇ ಸಿಗುವ ಬಹುದೊಡ್ಡ ಅವಕಾಶ ಬಳಸಿಕೊಳ್ಳಬೇಕು ಎಂದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ನೂತನ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು ವೀ.ವಿ. ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಡಾ.ರೋಹಿತ್ ಯು.ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ.ಮಾಲತೇಶ ಕೆ., ವೀ.ವಿ. ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಶರಣ ಬಸವನಗೌಡ ಹಾಗೂ ಮೇಟಿ ನಾಗರಾಜ್, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ, ಡೀನ್ ಆದ ಡಾ.ಅರುಣ್ ಮುಧೋಳ, ಪ್ರೊ.ರವಿಕುಮಾರ್ ಎಸ್.ಪಿ., ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.

2022-23ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂ.ಟೆಕ್‌ನ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಪುರುಷೋತ್ತಮ್‌ಗೆ ಹಾಗೂ ಬಿಇ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಎ.ಪವನಕುಮಾರ್ ರಾಜುಗೆ ಸಮಾರಂಭದಲ್ಲಿ ಪುರಸ್ಕರಿಸಲಾಯಿತು.

ಆರಂಭದಲ್ಲಿ ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್ ವಾದ್ಯದೊಂದಿಗೆ ಪದವಿ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಅನುಪಮ ಮತ್ತು ತಂಡ ನಾಡಗೀತೆ ಪ್ರಸ್ತುತ ಪಡಿಸಿದರು. ಡಾ.ವಿಶ್ವನಾಥ, ಪ್ರೊ.ಇಂದಿರಾ, ಪ್ರೊ.ಶಮಿತಾ ನಿರ್ವಹಿಸಿದರು.