ಸಾರಾಂಶ
ಶಾಂತಿ ನಗರದಲ್ಲಿ ಲಾರ್ವಾ ಸರ್ವೆ । ಮೊದಲನೇ, ಮೂರನೇ ಶುಕ್ರವಾರ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕಾರ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಸರ್ವೆ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ತಿಳಿಸಿದರು.ಶುಕ್ರವಾರ ನಗರದ ಶಾಂತಿ ನಗರದಲ್ಲಿ ಲಾರ್ವಾ ಸರ್ವೆ ಮಾಡಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿಶೇಷವಾಗಿ ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಲಾರ್ವಾ ಸರ್ವೆ ಮಾಡುತ್ತಿದ್ದಾರೆ ಎಂದರು.ನಾಲ್ಕನೇ ಶುಕ್ರವಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ ಸರ್ವೆ ಮಾಡುತ್ತಿದ್ದು, ನಾವು ಹೆಚ್ಚು ನಗರ ಪ್ರದೇಶದಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ನಮ್ಮ ಕಾರ್ಯಕ್ಕೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ನೀರು ಸಂಗ್ರಹಣಾಗಾರಗಳನ್ನು ಸರಿಯಾಗಿ ಮುಚ್ಚಳದಿಂದ ಮುಚ್ಚಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶ ವಾಗದಂತೆ ಎಚ್ಚರ ವಹಿಸಲು ಮನವಿ ಮಾಡಿದರು.ಈ ಸಂಬಂಧ ನಗರಸಭೆಯಿಂದ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಸ್ಪ್ರೇ, ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿದ್ದಾರೆ. ಚರಂಡಿಯಲ್ಲಿ, ತೆಂಗಿನ ಚಿಪ್ಪು, ಟೈರು ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಡ್ರಮ್‌ಗಳಲ್ಲಿ ತುಂಬಿರುವ ನೀರಿಗೆ ಸೊಳ್ಳೆಗಳು ಹೋಗದಂತೆ ಬಟ್ಟೆ ಕಟ್ಟುವ ಮೂಲಕ ಸಹಕರಿಸಬೇಕೆಂದು ವಿನಂತಿಸಿದರು.ಡೆಂಗ್ಯೂ ಸೊಳ್ಳೆಗಳು ಬೆಳಗಿನ ಸಮಯದಲ್ಲಿ ಕಚ್ಚುವುದರಿಂದ ವಯಸ್ಸಾದವರು, ರೋಗಿಗಳು ಇದ್ದರೆ ಸೊಳ್ಳೆ ಪರದೆ, ಕಿಟಕಿ ಗಳಿಗೆ ಸೊಳ್ಳೆ ಮೆಶ್, ಸೊಳ್ಳೆ ಬತ್ತಿ ಮುಂತಾದವುಗಳನ್ನು ಬಳಸುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಕೋರಿದರು.ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎನ್. ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್, ಆಶಾ ಕಾರ್ಯಕರ್ತೆಯರಾದ ಗಾಯಿತ್ರಿ, ಚಂದ್ರಮ್ಮ, ಮೇಘ, ಸವಿತ, ಸುಜಾತ, ಗೌರಿ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪೋಟೋ ಫೈಲ್ ನೇಮ್ 31 ಕೆಸಿಕೆಎಂ 4ಚಿಕ್ಕಮಗಳೂರಿನ ಶಾಂತಿನಗರ ಬಡಾವಣೆಯಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಲಾರ್ವಾ ಸರ್ವೆ ಮಾಡಲಾಯಿತು. ಡಾ. ಸೀಮಾ, ಜೆ.ಎನ್. ಬೇಬಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.