ಸಾರಾಂಶ
ಕುಂದಗೋಳ:
ತಂಬಾಕಿನಲ್ಲಿ 43 ಹಾನಿಕಾರಕ ಅಂಶಗಳಿದ್ದು, ಇದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಬೇಕೆಂದು ಜಿಲ್ಲಾ ತಂಬಾಕು ನಿಯಂತ್ರಣ ವಿಭಾಗದ ಆಪ್ತ ಸಂಯೋಜಕಿ ವೀಣಾ ಎನ್. ಹೇಳಿದರು.ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ತಂಬಾಕಿನಲ್ಲಿ ನಿಕೋಟಿನ್, ಕಾರ್ಬನ್ ಮೊನಾಸೈಡ್, ಮೆಂಥಾಲ್ ನಂತಹ 43 ಹಾನಿಕಾರಕ ಅಂಶಗಳು ಮಿಶ್ರಿತವಾಗಿರುತ್ತವೆ. ಇದರ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುವ ಆತಂಕವಿದೆ. ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡುತ್ತಿರುವುದು ಆತಂತಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಸ್ಥಳೀಯ ಸಂಘ-ಸಂಸ್ಥೆಗಳು, ಶಿಕ್ಷಕರು ಹಾಗೂ ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕುಂದಗೋಳ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ ಮಾತನಾಡಿ, ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ಮಾಡಲು ವಿಶ್ವ ತಂಬಾಕು ನಿಷೇಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಇದರಂತೆ ನಾವು ಕೂಡಾ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು ಎಂದರು.ಸಿವಿಲ್ ನ್ಯಾಯಾಧೀಶೆ ಗಾಯತ್ರಿ, ವಕೀಲರಾದ ಯು.ಎಂ. ಪಾಟೀಲ, ಎಸ್.ಎನ್. ತೊಂಡೂರು, ಜಿ.ಬಿ. ಸೊರಟೂರ, ವೈ.ಎಂ. ತಹಶೀಲ್ದಾರ, ಚಂದ್ರಕಲಾ ಪ್ರಭಾಕರ, ಗೀತಾ ಜಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸೂಫಿಯಾ ದಾಸರಿ, ಮುಖ್ಯ ವೈದ್ಯಾಧಿಕಾರಿ ಎಸ್.ಎಂ. ಕಗ್ಗಲಗೌಡ್ರ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ವೀರೇಶ ಅಂಗಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.