ಅರಣ್ಯ ಸಂರಕ್ಷಣೆಗೆ ಸಿಬ್ಬಂದಿ, ವಾಹನ ಕೊರತೆ

| Published : Jan 23 2024, 01:45 AM IST

ಸಾರಾಂಶ

ಸಿಬ್ಬಂದಿ ಹಾಗೂ ಅಗತ್ಯ ವಾಹನಗಳು ಇಲ್ಲದಿರುವುದರಿಂದ ಅರಣ್ಯ ಸಂರಕ್ಷಣೆಗೆ ಅಧಿಕಾರಿಗಳು ಪರದಾಡುವಂತಾಗಿದೆ.

ಮಲೆನಾಡ ಸೆರಗಿನ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ । ಪೈರು ನಾಶ ಮಾಡಿ ಭಯ ಹುಟ್ಟಿಸುತ್ತಿರುವ ಕಾಡುಪ್ರಾಣಿಗಳುಮಾರುತಿ ಶಿಡ್ಲಾಪುರ

ಕನ್ನಡಪ್ರಭ ವಾತೆ ಹಾನಗಲ್ಲ

ಒಂಬತ್ತು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದ ಹಾನಗಲ್ಲ ತಾಲೂಕು ಸಂರಕ್ಷಿತ ಅರಣ್ಯದಲ್ಲಿ ನೂರು ಹೆಕ್ಟೇರ್‌ ವ್ಯಾಪ್ತಿಯಲ್ಲಿ ಗಂಧ ಸೇರಿದಂತೆ ಬೆಲೆ ಬಾಳುವ ಮರಗಳಿವೆ. ಆದರೆ ಸಿಬ್ಬಂದಿ ಹಾಗೂ ಅಗತ್ಯ ವಾಹನಗಳು ಇಲ್ಲದಿರುವುದರಿಂದ ಸಂರಕ್ಷಣೆಗೆ ಅಧಿಕಾರಿಗಳು ಪರದಾಡುವಂತಾಗಿದೆ.

ಮಲೆನಾಡ ಸೆರಗಿನ ಹಾನಗಲ್ಲ ತಾಲೂಕಿನ ಪಶ್ಚಿಮ ಭಾಗ ಬಹುತೇಕ ಅರಣ್ಯ ಪ್ರದೇಶವಾಗಿದೆ. 34 ಹೆಕ್ಟೇರ್‌ನಷ್ಟು ಪ್ರದೇಶ ಒತ್ತುವರಿಯಾಗಿದೆ. ಅದರಲ್ಲಿ ೨೦ ಹೆಕ್ಟೇರ್ ಅರಣ್ಯವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಕಾನೂನು ನಿಯಮ ಆಧರಿಸಿ ಬಹುತೇಕ ಒತ್ತುವರಿ ತೆರವುಗೊಳಿಸಲಾಗಿದೆ. ಅರಣ್ಯ ಸಂರಕ್ಷಣಾ ಸಮಿತಿ ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ. ಪ್ರತಿ ವರ್ಷ ೫೦ ಹೆಕ್ಟೇರ್‌ನಷ್ಟು ಅರಣ್ಯ ಭೂಮಿಯಲ್ಲಿ ಹೊಸದಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನರೇಗಾ ಸೇರಿದಂತೆ ವಿವಿಧ ಯೋಜನೆಯಲ್ಲಿ ಮಾಡಲಾಗುತ್ತಿದೆ.

ಮುಂಗಾರು ಮುಗಿದು ಬೆಳೆ ಕಟಾವು ಸಮೀಪಿಸುತ್ತಿದ್ದಂತೆ ಇಲ್ಲಿಗೆ ಆನೆಗಳ ದಾಳಿ ಪ್ರತಿವರ್ಷವೂ ಇದ್ದೇ ಇದೆ. ಚಿರತೆ, ಜಿಂಕೆ, ಮಂಗಗಳು ಕೂಡ ಕಾಡು ಬಿಟ್ಟು ನಾಡಿನ ರೈತರ ಪೈರನ್ನು ತಿಂದು ಹಾನಿ ಮಾಡುವುದು ಕೂಡ ಸಹಜವೇ ಆಗಿದೆ. ಆನೆ, ಜಿಂಕೆ ದಾಳಿಯಿಂದ ಪೈರು ನಾಶವಾದ ರೈತರಿಗೆ ₹೨೧ ಲಕ್ಷ ಪರಿಹಾರವನ್ನು ಇಲಾಖೆ ನೀಡಿದೆ. ಇನ್ನೂ ಪರಿಹಾರ ಕೊಡುವುದು ಬಾಕಿ ಇದೆ.

ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲ ಎಂಬ ಕಾರಣಕ್ಕೆ ನಾಡಿಗೆ ದಾಳಿ ಇಡುವುದನ್ನು ತಪ್ಪಿಸಲು ಕಾಡಿನಲ್ಲಿ ಹತ್ತಾರು ಕಡೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸುವ ಕಾರ್ಯ ನಡೆದೇ ಇದೆ. ಆದರೂ ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ನುಗ್ಗಿ ಪೈರು ನಾಶ ಮಾಡಿ ಭಯ ಹುಟ್ಟಿಸುತ್ತಿವೆ. ಮುಂಡಗೋಡ ಶಿರಸಿ ಕಡೆಯಿಂದ ಆನೆಗಳು ಬಾರದಂತೆ ಕ್ರಮ ಜರುಗಿಸಲು ಯೋಜನೆ ರೂಪಿಸಲೇಬೇಕಾಗಿದೆ. ಇದಕ್ಕಾಗಿ ಹತ್ತು ಹಲವು ವರ್ಷಗಳಿಂದ ರೈತರು ಸಾರ್ವಜನಿಕರು ಬೇಡಿಕೆ ಮುಂದಿಡುತ್ತಲೇ ಬಂದಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಬಲವಾದ ಸಂರಕ್ಷಣಾ ಬೇಲಿ ತಾಲೂಕಿನ ಅರಣ್ಯ ಭಾಗದ ಗಡಿಯಲ್ಲಿ ಹಾಕುವುದು ಅತ್ಯವಶ್ಯವಾಗಿದೆ.

ಇಷ್ಟು ದೊಡ್ಡ ಕಾಡಿದ್ದರೂ ಕೂಡ ಅದರ ರಕ್ಷಣೆ, ಸಿಬ್ಬಂದಿಯ ತಿರುಗಾಟಕ್ಕೆ ವಾಹನಗಳ ಅಗತ್ಯವಿದೆ. ಆದರೆ ಹಾನಗಲ್ಲ ಅರಣ್ಯ ಇಲಾಖೆಯಲ್ಲಿರುವುದು ಒಂದೇ ವಾಹನ. ೧೦ ವಾಚರ್ಸ್‌ ಇದ್ದಾರೆ. ನಾಲ್ವರು ಡೆಪ್ಯುಟಿ ರೇಂಜರ್ಸ್‌, ೧೨ ಬೀಟ್ ಗಾರ್ಡ್‌ ಇದ್ದಾರೆ. ಆದರೆ ಇಷ್ಟು ದೊಡ್ಡ ಕಾಡಿನ ರಕ್ಷಣೆಗೆ ಇದರ ಎರಡರಷ್ಟು ಸಿಬ್ಬಂದಿ ಬೇಕಾಗುತ್ತದೆ. ಕಾಡು ರಕ್ಷಣೆಗೆ ಜನರ ಸಹಕಾರ ಬೇಕು. ಮರ ಕಡಿಯುವುದು. ಬೆಂಕಿ ಹಾಕುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಾಡಿನ ಸಂಪತ್ತು ನಾಶಕ್ಕೆ ಅವಕಾಶವಿಲ್ಲದಂತೆ ಇಲಾಖೆಯ ಸಿಬ್ಬಂದಿ ಜೊತೆಗೆ ಸಾರ್ವಜನಿಕರ ಸಹಕಾರವೂ ಬೇಕಾಗಿದೆ.